September 18, 2026
Friday, September 18, 2026
spot_img

ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ಹೋಗಿ ಫಾರಂ ಕೊಡ್ಬೇಕು: ರಾಜ್ಯ ಮುಖ್ಯ ಚುನಾವಣಾಧಿಕಾರಿ ಖಡಕ್‌ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ಹೋಗಿ ಫಾರಂ ಕೊಡ್ಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬಿಎಲ್‌ಒಗಳು ಮನೆಗಳಿಗೆ ತೆರಳದೇ ರಸ್ತೆಗಳಲ್ಲಿ ಟೆಂಟ್‌ ಹಾಕಿಕೊಂಡು ಕೂರುವುದು ಕಂಡುಬಂದಿದೆ. ಇನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬಿಎಲ್‌ಒಗಳು ಚೌಲ್ಟ್ರಿಯಲ್ಲಿ ಎಸ್‌ಐಆರ್‌ ಮಾಡ್ತಿದ್ದಾರೆ ಎಂದು ದೂರಿದರೆ ಬಿ. ವೈ. ವಿಜಯೇಂದ್ರ ಮಸೀದಿಗಳಲ್ಲಿ ಎಸ್‌ಐಆರ್‌ ಕೆಲಸ ನಡೀತಿದೆ ಎಂದು ಆರೋಪಿಸಿದ್ದಾರೆ.

ಜುಲೈ 2 ರಂದು ಬಂದಿರುವ ದೂರುಗಳನ್ನು ಆಧರಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಡೆಪ್ಯುಟಿ ಕಮಿಷನರ್‌ಗಳು ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಅಧಿಕೃತ ಸುತ್ತೋಲೆ ರವಾನಿಸಿರುವ ಸಿಇಒ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಡಕ್ ಸೂಚನೆ ನೀಡಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಹಾಗೂ ವೇಳಾಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಜೂನ್ 30 ರಿಂದಲೇ ಮತದಾರರಿಗೆ ಎನ್ಯೂಮರೇಶನ್ ಫಾರಂಗಳನ್ನು ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಫಾರಂ ಹಂಚುವ ಬದಲು, ಕಚೇರಿಗಳಲ್ಲೇ ಕುಳಿತು ವಿತರಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಸಿಇಒ ವಿ. ಅನ್ಬುಕುಮಾರ್, ಎಲ್ಲಾ ಬಿಎಲ್‌ಒಗಳು ಕಡ್ಡಾಯವಾಗಿ ಪ್ರತಿಯೊಬ್ಬ ಮತದಾರನ ಮನೆ ಬಾಗಿಲಿಗೆ ಭೇಟಿ ನೀಡಿ ಫಾರಂ ವಿತರಿಸಬೇಕು. ವಿಶೇಷ ತೀವ್ರ ಪರಿಷ್ಕರಣೆಯ ಎಲ್ಲಾ ಹಂತಗಳಲ್ಲೂ ಇಸಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ಅಗತ್ಯ ನಿರ್ದೇಶನ ನೀಡಬೇಕು ಎಂದು ಆದೇಶಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !