ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಕೊಟ್ಟ BMRCL : ಹಳದಿ ಮಾರ್ಗ ಚಾಲನೆಗೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಡಿನ ರಾಜಧಾನಿಯಾದ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯ ಕೇಂದ್ರಬಿಂದುವಾಗಿ ಪರಿಗಣಿಸಲ್ಪಟ್ಟಿರುವ ಮೆಟ್ರೋ ಸೇವೆಯು, ಸದ್ಯ ಹಳದಿ ಮಾರ್ಗದ ವಿಳಂಬದ ಕಾರಣದಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ಬೊಮ್ಮಸಂದ್ರದಿಂದ ಆರ್‌ವಿ ರಸ್ತೆವರೆಗಿನ 19 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ 16 ಮೆಟ್ರೋ ನಿಲ್ದಾಣಗಳಿದ್ದು, 2022ರಲ್ಲೇ ಓಪನ್ ಆಗಬೇಕಾದ ಯೋಜನೆ ಇನ್ನು ಪೂರ್ತಿಯಾಗಿಲ್ಲ.

BMRCL (ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್) ಇದುವರೆಗೆ 8 ಬಾರಿ ಡೆಡ್‌ಲೈನ್‌ಗಳನ್ನು ಮಿಸ್ ಮಾಡಿದೆ. ಈ ದೀರ್ಘ ವಿಳಂಬದ ವಿರುದ್ಧ ಬೆಂಗಳೂರಿನ ವಿವಿಧ ಕ್ಷೇತ್ರಗಳ ಬಿಜೆಪಿ ಸಂಸದರು, ಶಾಸಕರು ಸೇರಿದಂತೆ ನೂರಾರು ಕಾರ್ಯಕರ್ತರು ಲಾಲ್‌ಬಾಗ್‌ ಬಳಿ ಪ್ರತಿಭಟನೆ ಮಾಡಿದರು. ಸಂಸದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಶಾಸಕರು ಸಿಕೆ ರಾಮಮೂರ್ತಿ, ರವಿ ಸುಬ್ರಮಣ್ಯ ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಸಂಭವಿಸುತ್ತಿರುವ ಅನಾವಶ್ಯಕ ತೊಂದರೆಯ ಬಗ್ಗೆ BMRCL ಅಧಿಕಾರಿಗಳ ಗಮನಸೆಳೆದರು.

ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ ಅವರು ಆಗಸ್ಟ್ 15ರೊಳಗೆ ಮೆಟ್ರೋ ಸಂಚಾರ ಆರಂಭವಾಗದಿದ್ದರೆ, ಯೆಲ್ಲೋ ಲೈನ್‌ನ ಎಲ್ಲಾ ನಿಲ್ದಾಣಗಳಲ್ಲಿ ಶಕ್ತಿಪರಿಚಯದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬೆನ್ನಲ್ಲೇ BMRCL ಎಂಡಿ ಮಹೇಶ್ವರ್ ರಾವ್ ಅವರು ಸ್ಪಷ್ಟನೆ ನೀಡಿದ್ದು, ಅಗತ್ಯ ತಾಂತ್ರಿಕ ಕೆಲಸಗಳು ಜಾರಿಗೆ ಬರುವ ಹಂತದಲ್ಲಿದ್ದು, ನಿಯಮಾನುಸಾರವೇ ಕಾರ್ಯ ಚುರುಕುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅವರು ಆಗಸ್ಟ್ 15ರೊಳಗೆ ಮೆಟ್ರೋ ಸೇವೆಗೆ ಚಾಲನೆ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.

ಆದರೆ, ಪ್ರಾರಂಭದಲ್ಲಿ ಕೇವಲ 3 ಮೆಟ್ರೋ ರೈಲುಗಳ ಸೇವೆಯೇ ಲಭ್ಯವಿರುವ ಕಾರಣ, ಇಡೀ ಮಾರ್ಗದಲ್ಲಿ ತಕ್ಷಣ ಪೂರ್ಣ ಪ್ರಮಾಣದ ಸಂಚಾರ ಸಾಧ್ಯವಾಗುವುದಿಲ್ಲ ಪ್ರತಿ 6-7 ನಿಮಿಷಕ್ಕೊಮ್ಮೆ ಮೆಟ್ರೋ ಇರಲ್ಲ. ಕೇವಲ ಅರ್ಧ ಗಂಟೆಗೊಮ್ಮೆ ರೈಲು ಓಡುವ ಸಾಧ್ಯತೆಯಿದೆ. ಇದರೊಂದಿಗೆ ಆರಂಭದಲ್ಲಿ ಕೇವಲ 7-8 ನಿಲ್ದಾಣಗಳಲ್ಲಿಯೇ ಸಂಚಾರ ಆರಂಭಿಸುವ ಚರ್ಚೆಗಳು ನಡೆಯುತ್ತಿವೆ.

ಈ ಮೂಲಕ, ನಾಗರಿಕರ ಬಹುದಿನದ ನಿರೀಕ್ಷೆಯಾದ ಹಳದಿ ಮಾರ್ಗದ ಮೆಟ್ರೋ ಸೇವೆ ಇನ್ನೂ ಸ್ವಲ್ಪ ಸಮಯ ಕಾಯಬೇಕು ಎನ್ನುವುದು ಸ್ಪಷ್ಟವಾಗಿದೆ. ಆದರೆ ಆಗಸ್ಟ್ 15ರೊಳಗೆ ಸೇವೆ ಆರಂಭಿಸುವ ಭರವಸೆ ಸಾಕ್ಷಾತ್ BMRCL ಎಂಡಿಯಿಂದ ಬರುವಾಗ, ನಂಬಿಕೆ ಇಟ್ಟುಕೊಳ್ಳಲೇಬೇಕು ಏನಂತೀರಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!