ಹೊಸದಿಗಂತ ವರದಿ,ಅಂಕೋಲಾ:
ಅರಬ್ಬೀ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಗೋವಾ ರಾಜ್ಯದ ಬೋಟನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಪತ್ತೆ ಹಚ್ಚಿ ಸುರಕ್ಷಿತವಾಗಿ ತಾಲೂಕಿನ ಬೆಲೇಕೇರಿ ಬಂದರಿಗೆ ಕರೆ ತಂದಿದ್ದಾರೆ.
ಗೋವಾ ಪಣಜಿಯಿಂದ ನವಂಬರ್ 29 ರಂದು ಹೊರಟಿದ್ದ 27 ಜನ ಮೀನುಗಾರರಿದ್ದ ಕ್ರಿಸ್ಟೋ ರೇ ಎಂಬ ಹೆಸರಿನ ಬೋಟು ಎರಡು ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಕಣ್ಮರೆಯಾಗಿತ್ತು ಹಾಗೂ ಬೋಟಿನಲ್ಲಿದ್ದ ಮೀನುಗಾರರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.
ಅಂಕೋಲಾ ಬೇಲೆಕೇರಿ ಕಡಲ ವ್ಯಾಪ್ತಿಯಲ್ಲಿ ಬೋಟಿನ ಲೊಕೇಶನ್ ಕೊನೆಯದಾಗಿ ಪತ್ತೆಯಾಗಿತ್ತು.
ಯಾವುದೇ ರೀತಿಯ ಸಂಪರ್ಕ ಸಾಧ್ಯವಾಗದೆ ಇರುವುದರಿಂದ ಬೋಟಿನಲ್ಲಿ ಇದ್ದ ಮೀನುಗಾರರ ಕುರಿತು ಆತಂಕಕ್ಕೆ ಕಾರಣವಾಗಿತ್ತು.
ಬೋಟಿನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಬೆಲೇಕೇರಿಯಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ಇರುವ ಬೋಟನ್ನು ಪತ್ತೆ ಹಚ್ಚಿ ಅದರಲ್ಲಿದ್ದ 27 ಜನ ಮೀನುಗಾರರನ್ನು ಸುರಕ್ಷಿತವಾಗಿ ಬೆಲೇಕೇರಿ ಬಂದರಿಗೆ ಕರೆ ತಂದಿದ್ದಾರೆ.
ಹವಾಮಾನ ವೈಪರಿತ್ಯದ ಕಾರಣ ಬೋಟ್ ಇಂಜಿನ್ ಸಮಸ್ಯೆ ತಲೆದೋರಿ ಬೋಟ್ ಸಮುದ್ರದಲ್ಲಿ ತೇಲಿ ಹೋಗಿದ್ದು ನೆಟವರ್ಕ್ ಸಮಸ್ಯೆಯಿಂದಾಗಿ ಸಂಪರ್ಕ ಕಳೆದುಕೊಳ್ಳುವಂತಾಗಿತ್ತು ಎಂದು ತಿಳಿದು ಬಂದಿದೆ.