ಹೊಸದಿಗಂತ ವರದಿ,ಅಂಕೋಲಾ:
ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು ದೋಣಿಯಲ್ಲಿದ್ದ ಮೀನುಗಾರರನ್ನು ಬೇರೆ ದೋಣಿಗಳ ಮೀನುಗಾರರು ರಕ್ಷಿಸಿ ಅಪಾಯದಿಂದ ಪಾರು ಮಾಡಿದ್ದಾರೆ.
ಹಾರವಾಡ ಗಾಬೀತವಾಡದ ಬಾಬು ಟಾಕೇಕರ ಮತ್ತು ಸೋಮನಾಥ ಸಾದಿಯೆ ಎನ್ನುವವರು ಶ್ರೀ ಲಕ್ಷ್ಮೀ ರವಳನಾಥ ಹೆಸರಿನ ನಾಡ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಲೇಕೇರಿ ಹಾರವಾಡ ನಡುವಿನ ಕಡಲ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು ಭಾರೀ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಮೀನುಗಾರರು, ಬಲೆ ಸೇರಿದಂತೆ ಮೀನುಗಾರಿಕೆ ಪರಿಕರಗಳು ಸಮುದ್ರ ಪಾಲಾಗಿವೆ.
ನೀರು ಪಾಲಾದ ಮೀನುಗಾರರನ್ನು ಉಳಿದ ಮೀನುಗಾರರು ರಕ್ಷಿಸಿ ಮೇಲೆ ತಂದಿದ್ದು ಅಸ್ವಸ್ಥಗೊಂಡು ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರಾವಳಿ ಕಾವಲು ಪಡೆ ಪಿ.ಎಸ್. ಐ ಪ್ರಿಯಾಂಕಾ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.