ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕರ್ನಾಟಕದ ಮೂವರು ಪ್ರವಾಸಿಗರಲ್ಲಿ ಇಬ್ಬರ ಮೃತದೇಹಗಳು ಗುರುವಾರ ಬೆಳಗಿನ ಜಾವ ಬೆಂಗಳೂರು ತಲುಪಿವೆ.
ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರ ಮೃತದೇಹಗಳನ್ನು ಹೊತ್ತ ವಿಮಾನವು ಬೆಳಗಿನ ಜಾವ 3.45 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಸಂತ್ರಸ್ತರ ಕುಟುಂಬಗಳ ಹದಿಮೂರು ಸದಸ್ಯರು ಸಹ ಅದೇ ವಿಮಾನದಲ್ಲಿ ಆಗಮಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರದ ಸಾಫ್ಟ್ವೇರ್ ಎಂಜಿನಿಯರ್ ಮಧುಸೂಧನ್ ರಾವ್ ಅವರ ಮೃತದೇಹವನ್ನು ಚೆನ್ನೈಗೆ ಕೊಂಡೊಯ್ಯಲಾಗುತ್ತಿದೆ, ಅಲ್ಲಿಂದ ಅದನ್ನು ಅವರ ಹುಟ್ಟೂರು ಆಂಧ್ರಪ್ರದೇಶದ ನೆಲ್ಲೂರಿಗೆ ಸಾಗಿಸಲಾಗುವುದು.
ಮಂಜುನಾಥ ರಾವ್ ಅವರ ಸೋದರ ಮಾವ ಪ್ರದೀಪ್ ಮತ್ತು ಭೂಷಣ್ ಅವರ ಪತ್ನಿ ಸುಜಾತಾ ಅವರ ಸಂಬಂಧಿ ವಿನುತಾ ಅವರು ಮೃತದೇಹವನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿದ್ದರು. ದಾಳಿಯಲ್ಲಿ ಬದುಕುಳಿದ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಆರ್ ಮತ್ತು ಅವರ ಮಗ ಅಭಿಜಯ ಅವರನ್ನು ಸಂಬಂಧಿಕರೊಂದಿಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ರಾವ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗಲಾಗಿದ್ದು, ಮಧ್ಯಾಹ್ನದ ಮೊದಲು ಶಿವಮೊಗ್ಗ ತಲುಪುವ ನಿರೀಕ್ಷೆಯಿದೆ.
ಭೂಷಣ್ ಅವರ ದೇಹವು ಬೆಳಿಗ್ಗೆ 5.30 ರ ಸುಮಾರಿಗೆ ಯಶವಂತಪುರದ ಮತ್ತಿಕೆರೆಯಲ್ಲಿರುವ ಅವರ ನಿವಾಸ ತಲುಪಿದೆ. ಅನಾರೋಗ್ಯದ ಕಾರಣ ಮಗನ ಸಾವಿನ ಬಗ್ಗೆ ಅವರ ವೃದ್ಧ ತಾಯಿಗೆ ಮೃತದೇಹ ಬಂದ ನಂತರವೇ ತಿಳಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಭೂಷಣ್ ಅವರ ಮೃತದೇಹವನ್ನು ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ನಂತರ ಅಂತಿಮ ವಿಧಿವಿಧಾನ ನೇರವೇರಲಿದೆ.
ಬದುಕುಳಿದವರೊಂದಿಗೆ ಬಂದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಇತರರೊಂದಿಗೆ ಭಾರೀ ಭದ್ರತೆಯಲ್ಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು. ಸಿಐಎಸ್ಎಫ್ ಮತ್ತು ಸ್ಥಳೀಯ ಪೊಲೀಸರು ವಿಮಾನ ನಿಲ್ದಾಣದ ಆವರಣದಲ್ಲಿ ಮತ್ತು ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಿದ್ದರು.