ಚಳಿ ಇರಲಿ, ಮಳೆಗಾಲವಾಗಿರಲಿ, ಕೆಲವರು ಸ್ವಲ್ಪ ಹೊತ್ತು ನಡೆಯುತ್ತಿದ್ದರೂ ಬೆವರು ಬಹಳವಾಗಿ ಬರುತ್ತದೆ. ಇದರ ಜೊತೆಗೆ ದೇಹದಿಂದ ಬರುವ ದುರ್ವಾಸನೆ ಅವರಿಗೆ ಮುಜುಗರ ತರುತ್ತದೆ. ಸ್ನಾನ ಮಾಡಿದ ಮೇಲೆಯೂ ಈ ವಾಸನೆ ಹೋಗದೆ ಇರುವುದು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಈ ರೀತಿಯ ದೇಹದ ವಾಸನೆಯ ಸಮಸ್ಯೆಗೆ ಹಲವಾರು ಕಾರಣಗಳಿವೆ.
ಬ್ಯಾಕ್ಟೀರಿಯಾ ಬೆಳವಣಿಗೆ:
ದೇಹದಲ್ಲಿ ಸ್ವಲ್ಪ ತೇವಾಂಶ ಉಳಿದರೂ ಅದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಸೇರಿದಾಗ ದುರ್ವಾಸನೆ ಉಂಟುಮಾಡುತ್ತವೆ. ವಿಶೇಷವಾಗಿ ಕಂಕುಳ, ಬೆರಳಿನ ಮಧ್ಯೆ ಹಾಗೂ ಕಾಲುಪಾದಗಳಲ್ಲಿ ಇವು ಹೆಚ್ಚು ಬೆಳೆದು ವಾಸನೆ ಮೂಡಿಸುತ್ತವೆ.
ಮುನ್ನೆಚ್ಚರಿಕೆ: ಸ್ನಾನದ ವೇಳೆ ಈ ಭಾಗಗಳನ್ನು ಚೆನ್ನಾಗಿ ತೊಳೆಯಬೇಕು ಮತ್ತು ಆಂಟಿಬ್ಯಾಕ್ಟೀರಿಯಲ್ ಬಾಡಿ ವಾಶ್ ಅಥವಾ ಸಾಬೂನು ಬಳಸುವುದು ಉತ್ತಮ.
ತಪ್ಪಾದ ಉತ್ಪನ್ನಗಳ ಬಳಕೆ:
ಬಾಡಿ ವಾಶ್ಗಳು ಅಥವಾ ಸೋಪುಗಳು ವಾಸನೆ ಮಾತ್ರ ನಿಗ್ರಹಿಸಬಹುದು ಆದರೆ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವುದಿಲ್ಲ.
ಮುನ್ನೆಚ್ಚರಿಕೆ: ಉತ್ತಮ ಗುಣಮಟ್ಟದ ಆಂಟಿಬ್ಯಾಕ್ಟೀರಿಯಲ್ ಕ್ಲೆನ್ಸರ್ ಅಥವಾ ಡಿಯೋಡರೆಂಟ್ಗಳ ಬಳಕೆ ಶಿಫಾರಸು ಮಾಡಲಾಗುತ್ತದೆ.
ಬಟ್ಟೆ ಹಾಗೂ ಟವಲ್ನ ಅಸಮರ್ಪಕ ಬಳಕೆ:
ಒಂದೇ ಬಟ್ಟೆ ಅಥವಾ ಟವಲ್ ಅನ್ನು ವಾರದವರೆಗೂ ಬಳಸುವುದು ಸಾಮಾನ್ಯವಾದ ತಪ್ಪು. ಇವು ಬ್ಯಾಕ್ಟೀರಿಯಾ ಸಂಗ್ರಹಕ್ಕೆ ಕಾರಣವಾಗುತ್ತವೆ.
ಮುನ್ನೆಚ್ಚರಿಕೆ: ಪ್ರತಿಯೊಂದು ಬಳಕೆಯ ನಂತರ ಬಟ್ಟೆ ಹಾಗೂ ಟವಲ್ಗಳನ್ನು ತೊಳೆಯುವುದು ಅವಶ್ಯಕ.
ಹಾರ್ಮೋನ್ ಸಮಸ್ಯೆ ಮತ್ತು ಔಷಧಿ ಪರಿಣಾಮ:
ಹೈಪರ್ಹೈಡ್ರೋಸಿಸ್ (ಅತಿಯಾದ ಬೆವರುವಿಕೆ), ಶಿಲೀಂಧ್ರ ಸೋಂಕುಗಳು ಹಾಗೂ ಕೆಲ ಔಷಧಿಗಳು ದುರ್ವಾಸನೆಗೆ ಕಾರಣವಾಗಬಹುದು.
ಮುನ್ನೆಚ್ಚರಿಕೆ: ಈ ಬಗ್ಗೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಉತ್ತಮ.
ಆಹಾರದ ಆಯ್ಕೆ:
ಬೆಳ್ಳುಳ್ಳಿ, ಈರುಳ್ಳಿ, ಹೆಚ್ಚು ಪ್ರೋಟೀನ್ನಿಂದ ಕೂಡಿದ ಆಹಾರಗಳು ಹಾಗೂ ಅತಿಯಾದ ಆಲ್ಕೋಹಾಲ್ ಸೇವನೆಯು ಬೆವರಿನ ಮೂಲಕ ವಿಷಕಾರಿ ವಸ್ತುಗಳ ಬಿಡುಗಡೆಗೆ ಕಾರಣವಾಗಿ ದುರ್ವಾಸನೆ ತರುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ: ಈ ಆಹಾರಗಳನ್ನು ನಿಯಮಿತವಾಗಿ ಅಥವಾ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ.
ನಿತ್ಯವೂ ಸಾಕಷ್ಟು ನೀರು ಕುಡಿಯುವುದು, ದೇಹವನ್ನು ಒಣವಾಗಿಡುವುದು ಹಾಗೂ ತಾಜಾ ಬಟ್ಟೆ ಧರಿಸುವ ಅಭ್ಯಾಸ ಹೊಂದುವುದು ಉತ್ತಮ. ದೇಹದ ಸ್ವಚ್ಛತೆಯ ಜತೆಗೆ ಆಹಾರ ನಿಯಂತ್ರಣವೂ ದೇಹದ ವಾಸನೆಯನ್ನು ತಡೆಗಟ್ಟಲು ಮುಖ್ಯ ಪಾತ್ರವಹಿಸುತ್ತದೆ.