ಹೊಸದಿಗಂತ ವರದಿ ಮಡಿಕೇರಿ:
ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಬುಧವಾರ ಮಧ್ಯಾಹ್ನ ಮುಳುಗಿ ಸಾವಿಗೀಡಾದ ಮತ್ತೋರ್ವ ವಿದ್ಯಾರ್ಥಿಯ ಶವ ಗುರುವಾರ ಪತ್ತೆಯಾಗಿದೆ.
ಮಡಿಕೇರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಹೆಬ್ಬೆಟ್ಟಗೇರಿಯ ಚಂಗಪ್ಪ (17) ಮಡಿಕೇರಿ ರಾಜಾಸೀಟ್ ಬಳಿಯ ತರುಣ್ ತಮ್ಮಯ್ಯ(17) ಹಾಗೂ ಮಡಿಕೇರಿ ರಾಣಿಪೇಟೆಯ ನವೀನ್ ಪೊನ್ನಪ್ಪ ಸಹಿತ ಮೂವರು ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಮದ ಹಾದ್ರೆ ಹೆರೂರು ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕೆಂದು ತೆರಳಿದ್ದರು.
ಈ ಸಂದರ್ಭ ಚಂಗಪ್ಪ ಮತ್ತು ತರುಣ್ ತಿಮ್ಮಯ್ಯ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದು, ಈ ಪೈಕಿ ಬುಧವಾರ ಸಂಜೆ ಚಂಗಪ್ಪ ಎಂಬಾತನ ಮೃತದೇಹವನ್ನು ಹೊರತೆಗೆಯಲಾಗಿತ್ತು. ಆದರೆ ಕತ್ತಲು ಆವರಿಸಿದ್ದರಿಂದ ಮತ್ತು ಆ ಭಾಗದಲ್ಲಿ ಕಾಡಾನೆಗಳ ಹಾವಳಿ ಇರುವುದರಿಂದ ಬುಧವಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಬುಧವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ವಿದ್ಯಾರ್ಥಿ ತರುಣ್ ತಮ್ಮಯ್ಯನ ಮೃತದೇಹ ಪತ್ತೆಯಾಗಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು, ದುಬಾರೆ ರ‍್ಯಾಪ್ಟಿಂಗ್ ಸಿಬ್ಬಂದಿಗಳು ಶವವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವಿಗೀಡಾದ ಮತ್ತೋರ್ವ ವಿದ್ಯಾರ್ಥಿಯ ಶವ ಪತ್ತೆ

