ಹೊಸದಿಗಂತ ವರದಿ,ವಿಜಯಪುರ:
ಗ್ರಾಮೀಣ ಭಾಗದ ಶಾಲೆಗಳಲ್ಲಿ ಬಿಸಿಯೂಟದ ಅಕ್ಕಿ ಸೇರಿದಂತೆ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಕಿ ಕಳ್ಳತನ ಮಾಡುತ್ತಿದ್ದ ಆರೋಪಿಗಳಾದ ಶರತ್ ದೊಡಮನಿ, ಶ್ರೀಕಾಂತ್ ಕಟ್ಟಿಮನಿ, ಮಲ್ಲಿಕಾರ್ಜುನ ಮೋಪಗಾರ, ಸಂತೋಷ ಹೊಸಕೋಟಿ, ಸಂಜೀವಪ್ಪ ಮ್ಯಾಗೇರಿ, ಸಚಿನ್ ಹುಣಶ್ಯಾಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಲ್ಲದೇ, ಕಳ್ಳತನದ ಅಕ್ಕಿ ಖರೀದಿಸುತ್ತಿದ್ದ ರಾಹುಲ್ ಪವಾರ್, ನಾಗರಾಜ್ ಉಪ್ಪಿನನ್ನು ಕೂಡ ಬಂಧಿಸಲಾಗಿದೆ ಎಂದರು.
ಈ ಆರೋಪಿಗಳು ಗ್ರಾಮೀಣ ಭಾಗದ ಹಿಟ್ನಳ್ಳಿ, ಇಟ್ಟಂಗಿಹಾಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದರು. ಇನ್ನು ಬಂಧಿತರಿಂದ 2.70 ಲಕ್ಷ ಮೌಲ್ಯದ 50 ಕ್ವಿಂಟಾಲ್ ಅಕ್ಕಿ, 2.24 ಲಕ್ಷ ಮೌಲ್ಯದ 15 ಕ್ವಿಂಟಾಲ್ ತೊಗರಿ ಬೆಳೆ, ಎರಡು ಮಿನಿ ಗೂಡ್ಸ್, ಒಂದು ಕ್ರೂಜರ್, ಒಂದು ಲಕ್ಷದ ಆರು ಸಾವಿರ ರೂ. ನಗದು ಸೇರಿದಂತೆ 25 ಲಕ್ಷದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್ಐ ಜಿ.ಎಸ್. ಉಪ್ಪಾರ ಸೇರಿದಂತೆ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿದೆ ಎಂದರು.
ಎಎಸ್’ಪಿ ಡಾ.ರಾಮ ಅರಸಿದ್ದಿ, ಡಿವೈಎಸ್’ಪಿ ಸಿದ್ದೇಶ್ವರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.