ಹೊಸದಿಗಂತ ವರದಿ,ಮಳವಳ್ಳಿ:
ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಆಕೆಯ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ಕೊಳ್ಳೆಗಾಲ ರಸ್ತೆಯ ಕಣಿಗಲ್ ಹಳ್ಳದ ಬಳಿ ನಡೆದಿದೆ.
ತಾಲ್ಲೂಕಿನ ಕುಂದೂರು ಗ್ರಾಮದ ಪ್ರಸಾದ್ ಎಂಬುವರ ಪತ್ನಿ ಶಿಲ್ಪ (39) ಎಂಬುವರೇ ಮೃತಪಟ್ಟ ದುರ್ದೈವಿ, 7 ವರ್ಷದ ಅನನ್ಯ ಹಾಗೂ 5 ವರ್ಷದ ಮಾನ್ಯ ಗಾಯಗೊಂಡವರಾಗಿದ್ದಾರೆ.
ಪಟ್ಟಣದ ರೋಟರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆದು ಕೊಂಡು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ತಮ್ಮ ಸ್ಕೂಟಿಯಲ್ಲಿ ಕುಂದೂರು ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಮುಟ್ಟನಹಳ್ಳಿ ಕಡೆಯಿಂದ ಎಳನೀರು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಬೊಲೆರೋ ವಾಹನ ತಿರುವಿನಲ್ಲಿ ಡಿಕ್ಕಿ ಹೊಡೆಯಿತು.
ತಲೆಗೆ ತೀವ್ರ ಪೆಟ್ಟು ಬಿದ್ದು ಶಿಲ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅನನ್ಯ ಹಾಗೂ ಮಾನ್ಯ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.