ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಚಾಕುವಿನಿಂದ ಇರಿದ ಆರೋಪದ ಮೇಲೆ ಬಂಧಿತರಾಗಿರುವ ಬಾಂಗ್ಲಾದೇಶಿ ಪ್ರಜೆ, ತಾನು ನಿರಪರಾಧಿ ಮತ್ತು ತಮ್ಮ ವಿರುದ್ಧದ ಎಫ್‌ಐಆರ್ ‘ಕಾಲ್ಪನಿಕ ಕಥೆ’ ಅನ್ನುತ್ತಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಜನವರಿ 16ರಂದು ಬಾಂದ್ರಾ ಪ್ರದೇಶದ ಐಷಾರಾಮಿ ಆಪಾರ್ಟ್‌ಮೆಂಟಿನ 12ನೇ ಮಹಡಿಯಲ್ಲಿರುವ 54 ವರ್ಷದ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ಆರೋಪಿ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದನು.
ಘಟನೆ ನಡೆದ ಎರಡು ದಿನಗಳ ನಂತರ ಜನವರಿ 19 ರಂದು, ಪೊಲೀಸರು ನೆರೆಯ ಥಾಣೆಯಲ್ಲಿ ಶರೀಫುಲ್ ಇಸ್ಲಾಂ (30) ಎಂಬಾತನನ್ನು ಪೊಲೀಸರು ಬಂಧಿಸಿ ಕರೆತಂದಿದ್ದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ನಿಗದಿಪಡಿಸಿದ್ದು, ಬಂಧಿತ ಇಸ್ಲಾಂ ಸದ್ಯ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿದ್ದಾನೆ.
ವಕೀಲ ವಿಪುಲ್ ದುಶಿಂಗ್ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ, ಆರೋಪಿಯು ತಾನು ನಿರಪರಾಧಿ ಮತ್ತು ಯಾವುದೇ ಹಿಂದಿನ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿದ್ದಾನೆ.
ಘಟನೆಯ ತನಿಖೆ ಪ್ರಾಯೋಗಿಕವಾಗಿ ಮುಗಿದಿದ್ದು, ಆರೋಪಪಟ್ಟಿ ಸಲ್ಲಿಸುವುದು ಮಾತ್ರ ಬಾಕಿ ಇದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕರೆ ದಾಖಲೆಗಳು ಸೇರಿದಂತೆ ನಿರ್ಣಾಯಕ ಪುರಾವೆಗಳು ಈಗಾಗಲೇ ಪ್ರಾಸಿಕ್ಯೂಷನ್ ಬಳಿ ಇವೆ. ಸಾಕ್ಷ್ಯಗಳನ್ನು ಹಾಳುಮಾಡುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಕೆಲಸವನ್ನು ಇಸ್ಲಾಂ ಮಾಡುವುದಿಲ್ಲ ಎಂದು ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.
ಸದ್ಯ ದಾಖಲಿಸಿರುವ ಎಫ್‌ಐಆರ್ ದೂರುದಾರರ ಕಾಲ್ಪನಿಕ ಕಥೆಯಾಗಿದೆ. ಆದ್ದರಿಂದ, ಹೀಗಾಗಿ ನಾನು ಜಾಮೀನು ನೀಡುವಂತೆ ಪ್ರಾರ್ಥಿಸುತ್ತೇನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.