ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರ ಸಿನಿಮಾ ಅಂದರೆ ಅಲ್ಲಿ ವಿಭಿನ್ನತೆ ಇರುತ್ತೆ. ಅವರ ನಟನೆ ತಲುಪುವಂತಿರುತ್ತದೆ. ಅದಕ್ಕೆ ಉದಾಹರಣೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ.
ಆ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
ಇದೀಗ ನೂತನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರವೀಂದ್ರನಾಥ್ ಟ್ಯಾಗೋರ್ (Rabindranath Tagore) ಪಾತ್ರದಲ್ಲಿ ಅನುಪಮ್ ಖೇರ್ ಅಭಿನಯಿಸುತ್ತಿದ್ದಾರೆ ಎಂಬುದು ವಿಶೇಷ. ಇದು ಅವರು ನಟಿಸುತ್ತಿರುವ 583ನೇ ಸಿನಿಮಾ ಆಗಲಿದೆ.
ಬೆಂಗಾಲಿ ಕವಿ, ಲೇಖಕ, ತತ್ವಜಾನಿ ರವೀಂದ್ರನಾಥ್ ಟ್ಯಾಗೋರ್ ಅವರ ಪಾತ್ರವನ್ನು ಮಾಡುವುದು ಎಂದರೆ ಸುಲಭದ ಮಾತಲ್ಲ. ಆ ಪಾತ್ರಕ್ಕಾಗಿ ಅನುಪಮ್ ಖೇರ್ ಆಯ್ಕೆ ಆಗಿದ್ದಾರೆ. ಈ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅವರು ಸಖತ್ ಖುಷಿಯಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ಅಚ್ಚರಿ ಎನಿಸಿದೆ.
ಈ ಸಿನಿಮಾದ ಶೀರ್ಷಿಕೆ ಏನು? ಪಾತ್ರವರ್ಗದಲ್ಲಿ ಬೇರೆ ಯಾರೆಲ್ಲ ಇರಲಿದ್ದಾರೆ? ನಿರ್ದೇಶನ ಮಾಡೋದು ಯಾರು? ಯಾವ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ? ಈ ಯಾವ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಕೇವಲ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅನುಪಮ್ ಖೇರ್ ಅವರು ಕುತೂಹಲ ಮೂಡಿಸಿದ್ದಾರೆ.