ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರಣಾವತ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ರಾಜಕೀಯ ವಯಲದಲ್ಲಿ ಚರ್ಚೆ ನಡೆಯುತ್ತಿದ್ದು, ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಹೇಳಿಕೆಯೊಂದು ಹೊರಬಿದ್ದಿದೆ.
ಕಂಗನಾ ತಂದೆ ಅಮರ್ದೀಪ್ ರಣಾವತ್ ಸ್ಪಷ್ಟಪಡಿಸಿದ್ದು, ತಮ್ಮ ಮಗಳು ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ಕಂಗನಾ ತಮ್ಮ ರಾಜಕೀಯ ವಲಯದ ಆಕಾಂಕ್ಷೆಗಳ ಬಗ್ಗೆ ಸುಳಿವು ನೀಡಿದ್ದರು. ಶ್ರೀಕೃಷ್ಣನ ಆಶೀರ್ವಾದವಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು.
ಎರಡು ದಿನಗಳ ಹಿಂದೆ ಕಂಗನಾ ರಣಾವತ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ಇದು ಈವರೆಗಿನ ವದಂತಿಗಳಿಗೆ ತುಪ್ಪ ಸುರಿದಂತಿತ್ತು.
ಈ ಎಲ್ಲ ಊಹಾಪೋಹಗಳ ಮಧ್ಯೆ ಕಂಗನಾ ತಂದೆ ಅಮರ್ದೀಪ್ ರಣಾವತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತಮ್ಮ ಮಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಬಿಜೆಪಿ ಪಕ್ಷದಿಂದಲೇ ಕಣಕ್ಕಿಳಿಯಲಿದ್ದಾರೆ. ಆದರೆ, ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಹಿಂದಿ ಚಿತ್ರರಂಗದ ಅಭಿನೇತ್ರಿ ತಯಾರಿ ನಡೆಸುತ್ತಿದ್ದಾರೆ.