ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕುರಿತು ಬಾಲಿವುಡ್ ಸೆಲೆಬ್ರಿಟಿಗಳ ಮೌನದ ಕುರಿತು ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದು, ಕೆಲವು ಬಾಲಿವುಡ್ ವ್ಯಕ್ತಿಗಳು ರಾಜಕೀಯವಾಗಿ ಸಕ್ರಿಯರಾಗಿದ್ದರೂ ಇನ್ನು ಕೆಲವರು ತಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿರಬಹುದು ಎಂದು ಹೇಳಿದರು.
ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ ಈ ಕುರಿತು ಬಾಲಿವುಡ್ ಸೆಲೆಬ್ರಿಟಿಗಳು ಮೌನವಹಿಸಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಟೀಕಿಸಿತು. ಬಾಲಿವುಡ್ ತಾರೆಯರು ಈ ಕುರಿತು ಮೌನವಹಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಾವೇದ್ ಅಖ್ತರ್ , ನಾನು ಮಾತನಾಡುತ್ತೇನೆ. ನಾನು ಯಾವಾಗಲೂ ಮಾತನಾಡಿದ್ದೇನೆ. ಕೆಲವೊಮ್ಮೆ ಜನರು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.
ಕೆಲವು ಬಾಲಿವುಡ್ ವ್ಯಕ್ತಿಗಳು ರಾಜಕೀಯವಾಗಿ ಸಕ್ರಿಯರಾಗಿದ್ದರೂ ಇತರರು ತಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿರಬಹುದು. ಯಾರಾದರೂ ಮಾತನಾಡದಿದ್ದರೆ ಏನು? ದೇಶ ಮಾತನಾಡುತ್ತಿದೆ. ಅನೇಕ ಜನರು ಮಾತನಾಡುತ್ತಿದ್ದಾರೆ. ಕೆಲವರು ಹೆಚ್ಚು ಹಣ ಗಳಿಸುವಲ್ಲಿ ಅಥವಾ ತಮ್ಮ ಹೆಸರನ್ನು ಗಳಿಸುವಲ್ಲಿ ನಿರತರಾಗಿದ್ದಾರೆ. ಅವರನ್ನು ಬಿಡಿ ಎಂದರು.
ಯಾರಾದರೂ ಅನುಕೂಲಕರ ಅಥವಾ ಹಗುರವಾದ ವಿಷಯಗಳ ಬಗ್ಗೆ ಮಾತನಾಡಬಹುದು. ಆದರೆ ಇತರರನ್ನು ಆರೋಪಿಸುವವರು ಗಂಭೀರ ಮತ್ತು ಅನಾನುಕೂಲ ವಿಷಯಗಳ ಬಗ್ಗೆ ಮಾತನಾಡುವ ಧೈರ್ಯವನ್ನು ತೋರಿಸಬೇಕು ಎಂದರು.