ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಸದ್ಯ ಸುದ್ದಿಯಲ್ಲಿದ್ದಾರೆ. 9 ಕೋಟಿ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಅವರು, ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಈ ಕಠಿಣ ಸಮಯದಲ್ಲಿ ಚಿತ್ರರಂಗದ ಗಣ್ಯರು ಅವರಿಗೆ ನೀಡಿದ ಬೆಂಬಲ ಈಗ ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ, ರಾಜ್‌ಪಾಲ್ ಅವರು 1.5 ಕೋಟಿ ರೂಪಾಯಿ ಮರುಪಾವತಿ ಮಾಡಿ ಜಾಮೀನು ಪಡೆಯಲು ಬಾಲಿವುಡ್‌ನ ದೊಡ್ಡ ತಾರೆಯರು ಸಹಾಯ ಮಾಡಿದ್ದಾರೆ. ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್ ಮತ್ತು ಮಿಕಾ ಸಿಂಗ್ ಅಂತಹ ಕಲಾವಿದರು ಆರ್ಥಿಕ ನೆರವು ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಕೇಳಿದಾಗ ರಾಜ್‌ಪಾಲ್ ಯಾದವ್ ಅವರು ಯಾರ ಹೆಸರನ್ನೂ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ತಮ್ಮ ಮೇಲಿರುವ ಆರೋಪಗಳ ಬಗ್ಗೆ ಮಾತನಾಡಿದ ಅವರು, “2012ರಿಂದ ನನ್ನನ್ನು ಮೋಸಗಾರ ಎಂದು ಬಿಂಬಿಸಲಾಗುತ್ತಿದೆ. ಆದರೆ ಅಂದಿನಿಂದ ಇಂದಿನವರೆಗೆ ನಾನು ವರ್ಷಕ್ಕೆ ಹತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ನಾನು ನಿಜವಾಗಿಯೂ ಮೋಸಗಾರನಾಗಿದ್ದರೆ ಚಿತ್ರರಂಗ ನನ್ನನ್ನು ಇಷ್ಟು ವರ್ಷ ಅಪ್ಪಿಕೊಳ್ಳುತ್ತಿರಲಿಲ್ಲ. ಎಲ್ಲರೂ ನನ್ನ ಜೊತೆಗಿದ್ದಾರೆ ಎಂದು ಸಾಬೀತುಪಡಿಸುವ ಅಗತ್ಯ ನನಗಿಲ್ಲ” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಜೈಲಿನ ಅನುಭವಗಳ ಬಗ್ಗೆಯೂ ಮಾತನಾಡಿದ ನಟ, ಜೈಲುಗಳು ಕೇವಲ ಶಿಕ್ಷೆಯ ಕೇಂದ್ರಗಳಾಗಬಾರದು, ಅವು ‘ಬದಲಾವಣೆಯ ಕೇಂದ್ರ’ಗಳಾಗಬೇಕು ಎಂದು ಆಶಿಸಿದ್ದಾರೆ. ಕೈದಿಗಳು ತಮ್ಮನ್ನು ತಿದ್ದಿಕೊಳ್ಳಲು ಅಲ್ಲಿ ಪೂರಕ ವಾತಾವರಣವಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.



