ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಕ್ವೆಟ್ಟಾದ ಬುಗ್ಟಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಿಎಸ್ಎಲ್ನ ಪಂದ್ಯದ ವೇಳೆ ಬಾಂಬ್ ಸ್ಪೋಟಗೊಂಡಿದ್ದು, ಹೀಗಾಗಿ ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಣ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ
ಇದೇ ವೇಳೆ ಸ್ಟೇಡಿಯಂನಲ್ಲಿ ಪ್ರೇಕ್ಷಕರ ನಡುವೆಯೂ ಘರ್ಷಣೆ ಉಂಟಾಗಿದ್ದು, ಬಳಿಕ ಆಟಗಾರರನ್ನು ಸುರಕ್ಷಿತವಾಗಿ ಸ್ಟೇಡಿಯಂನಿಂದ ಹೊರಕ್ಕೆ ಕರೆದೊಯ್ಯಲಾಯಿತು. ಕ್ವೆಟ್ಟಾದ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಪಂದ್ಯದಲ್ಲಿಟಾಸ್ ಗೆದ್ದ ಝಲ್ಮಿ ತಂಡದ ನಾಯಕ ಬಾಬರ್ ಆಜಮ್ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. 19 ಓವರ್ಗಳಲ್ಲಿ ಮೊತ್ತ 148 ಕ್ಕೆ ಬಂದು ನಿಂತಿತು. ಇನ್ನು ವಹಾಬ್ ರಿಯಾಝ್ ಎಸೆದ 20ನೇ ಓವರ್ನಲ್ಲಿ ಇಫ್ತಿಕಾರ್ ಅಹ್ಮದ್ ಬ್ಯಾಕ್ ಟು ಬ್ಯಾಕ್ 6 ಸಿಕ್ಸ್ಗಳನ್ನು ಸಿಡಿಸಿದರು. ಈ ಮೂಲಕ 36 ರನ್ ಕಲೆಹಾಕಿ ತಂಡದ ಮೊತ್ತವನ್ನು 184 ಕ್ಕೆ ತಂದು ನಿಲ್ಲಿಸಿದರು.