ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಬಸವೇಶ್ವರ ನಗರದ ಖಾಸಗಿ ಶಾಲೆಗಳು, ಸದಾಶಿವ ನಗರ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಶಾಲೆಗಳಿಗೆ ಪೊಲೀಸರು ದೌಡಾಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು ಶಾಲೆಯ ಬಳಿ ಆಗಮಿಸಿದ್ದು, ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದೀಗ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದು, ಬಾಂಬ್ ಸ್ಕ್ವಾಡ್ ಹಾಗೂ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ಇದೇ ಮೊದಲೇನಲ್ಲ ಈ ಹಿಂದೆಯೂ ಬಾಂಬ್ ಇದೆ ಎಂದು ಕರೆ ಹಾಗೂ ಇ-ಮೇಲ್ ಮಾಡಲಾಗಿತ್ತು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದಾಶಿವ್ ನಗರದ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿವಿ ನೋಡಿದೆ, ತಕ್ಷಣವೇ ಹತ್ತಿರದ ಶಾಲೆಗೆ ಆಗಮಿಸಿದ್ದೇನೆ, ಬೆದರಿಕೆ ಇ-ಮೇಲ್ ತೋರಿಸಿದ್ದಾರೆ. ಪ್ರಾರ್ಥಮಿಕ ಮಾಹಿತಿಯಿಂದ ಇದು ಹುಸಿ ಬಾಂಬ್ ಬೆದರಿಕೆ ಎನಿಸುತ್ತಿದೆ ಎಂದಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ದಯಾದಂತ್ ತುರ್ತು ಸುದ್ದಿಗೋಷ್ಠಿ ಕರೆದಿದ್ದು, ಪೋಷಕರು ಆತಂಕ ಪಡಬೇಡಿ, ಶಾಲೆಗಳಿಗೆ ಬಾಂಬ್‌ಸ್ಕ್ವಾಡ್ ಆಗಮಿಸಿದೆ. ನಿಮ್ಮ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವೇ ನಿಮಿಷದಲ್ಲಿ ಇದು ಹುಸಿ ಬಾಂಬ್ ಕರೆಯೋ ಎನ್ನುವ ಮಾಹಿತಿ ಲಭ್ಯವಾಗಲಿದೆ ಸಂದೇಶದ ತನಿಖೆ ಆಗುತ್ತಿದೆ ಆತಂಕ ಬೇಡ ಎಂದಿದ್ದಾರೆ.