ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಜೈಪುರದ ಎರಡು ಉನ್ನತ ದರ್ಜೆಯ ಹೊಟೇಲ್ ಗಳಿಗೆ ಶನಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ತಕ್ಷಣವೇ ಹೊಟೇಲ್ ಗಳಲ್ಲಿದ್ದ ಎಲ್ಲಾ ಗ್ರಾಹಕರನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಫೆಲ್ಸ್ ಹೊಟೇಲ್ ಮತ್ತು ಹಾಲಿಡೇ ಇನ್ ಹೊಟೇಲ್ ಗೆ ಬಾಂಬ್ ಬೆದರಿಕೆ ಬಂದಿದ್ದು, ಭದ್ರತಾ ಪರಿಶೀಲನೆ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಈ ಸಂದರ್ಭ ರಾಜಸ್ಥಾನ ಗೃಹ ಸಚಿವ ಜವಾಹರ್ ಸಿಂಗ್ ಬೆಧಮ್, ಕೌಶಲ್ಯ, ಉದ್ಯೋಗ ಮತ್ತು ಉದ್ಯಮಶೀಲತೆ ಸಚಿವ ಕೆ ಕೆ ವಿಷ್ಣೋಯ್ ಹಾಗೂ ಸಹಕಾರಿ ಖಾತೆ ರಾಜ್ಯ ಸಚಿವ ಗೌತಮ್ ಡಾಕ್ ಅವರು ಹಾಲಿಡೇ ಇನ್ ಹೊಟೇಲ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ತಕ್ಷಣ ಮೂವರು ಸಚಿವರು ಸಹ ತಕ್ಷಣ ಆವರಣವನ್ನು ತೊರೆದರು ಎಂದು ಅವರು ಹೇಳಿದ್ದಾರೆ.
ಬಾಂಬ್ ಮತ್ತು ಶ್ವಾನ ದಳಗಳು ಹೊಟೇಲ್ ನಲ್ಲಿ ಸಂಪೂರ್ಣ ಶೋಧ ನಡೆಸಿದವು. ಆದರೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೆಚ್ಚುವರಿ ಡಿಸಿಪಿ (ದಕ್ಷಿಣ) ಲಲಿತ್ ಶರ್ಮಾ ತಿಳಿಸಿದ್ದಾರೆ.