ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪು ಕೋಟೆ ಬಳಿ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಗೊಳಿಸಿದೆ.
ತನಿಖೆಯ ಪ್ರಕಾರ, ಸ್ಫೋಟಕ್ಕೂ ಮುನ್ನ ದೆಹಲಿಗೆ ಉಗ್ರರ ಎರಡು ಕಾರುಗಳು ಎಂಟ್ರಿಯಾಗಿದ್ದವು. ಅದಾದ ಬಳಿಕ ಕೆಂಪುಕೋಟೆ ಬಳಿ ಆ ಪೈಕಿ ಒಂದು ಕಾರು ಸ್ಫೋಟಗೊಂಡಿತ್ತು.
ಇದನ್ನರಿತ ಅಧಿಕಾರಿಗಳು ಇನ್ನೊಂದು ಕಾರಿನ ಪತ್ತೆ ಹಚ್ಚುತ್ತಿದ್ದರು. ದೆಹಲಿಯಲ್ಲಿ ಚೆಕ್‌ಪೋಸ್ಟ್ ಮೂಲಕ ಕಾರಿನ ಹುಡುಕಾಟ ನಡೆಸಿದ್ದರು. ಬಳಿಕ ಫರೀದಾಬಾದ್ ಪೊಲೀಸರು ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪತ್ತೆಹಚ್ಚಿದ್ದರು.
ಪತ್ತೆಯಾದ ಕಾರು ಕೂಡ ದೆಹಲಿ ಸ್ಫೋಟದ ಪ್ರಮುಖ ಶಂಕಿತ ಡಾ.ಉಮರ್ ಉನ್ ನಬಿಗೆ ಸೇರಿದ್ದು, ನಕಲಿ ದಾಖಲೆಗಳನ್ನು ನೀಡಿ, ಕಾರು ಖರೀದಿಸಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದಾಳಿಯಾದ ಬಳಿಕ ವಾಹನದ ಮಾಲೀಕತ್ವದ ಬಗ್ಗೆ ಮಾಹಿತಿ ಸಿಗಬಾರದು ಎಂಬ ಉದ್ದೇಶದೊಂದಿಗೆ ನಕಲಿ ದಾಖಲೆಗಳನ್ನು ನೀಡಿದ್ದ. ಪತ್ತೆಯಾದ ಕಾರು ಡಾ.ಉಮರ್ ಉನ್ ನಬಿ ಹೆಸರಿನಲ್ಲಿ ನೋಂದಣಿಯಾಗಿದ್ದು, ಈಶಾನ್ಯ ದೆಹಲಿಯ ನ್ಯೂ ಸೀಲಾಂಪುರ್ ಪ್ರದೇಶದ ವಿಳಾಸವೊಂದನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಇನ್ನೂ ಸ್ಫೋಟಕ್ಕೂ ಮುನ್ನ ಉಮರ್ ರಾಮಲೀಲಾ ಮೈದಾನದ ಬಳಿಕ ಅಸಫ್ ಅಲಿ ರಸ್ತೆಯಲ್ಲಿರುವ ಮಸೀದಿಯಲ್ಲಿದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ಹೊರಟು ಸುನೇಹ್ರಿ ಮಸೀದಿ ಪಾರ್ಕಿಂಗ್‌ಗೆ ಬಂದು ಕಾರು ನಿಲ್ಲಿಸಿದ್ದ. ಸದ್ಯ ಅಧಿಕಾರಿಗಳು ಉಮರ್ ಮೊಬೈಲ್ ಹಿಸ್ಟರಿ, ಸಿಗ್ನಲ್ ಪತ್ತೆ ಹಚ್ಚಲು ಮುಂದಾಗಿದ್ದಾರೆ.

