ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈಗಾಗಲೇ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ನಾಯಕರ ಭೇಟಿಗೆ ಯತ್ನಿಸಿದ್ದಾರೆ. ಸೋಮವಾರ ಇಡೀ ದಿನ ವರಿಷ್ಠರ ಭೇಟಿಗೆ ಬೊಮ್ಮಾಯಿ ಕಾದಿದ್ದು, ಸಮಯ ಸಿಗದಂತಾಗಿತ್ತು. ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆಗಳ ಮಂಡನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವರಿಷ್ಠರ ಭೇಟಿ ಸಾಧ್ಯವಾಗಿಲ್ಲ.
ಇಂದು ವರಿಷ್ಠರನ್ನು ಭೇಟಿ ಮಾಡಿ, ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಯಾರಾಗಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಮಾಜಿ ಸಿಎಂ ಬೊಮ್ಮಾಯಿ ಭೇಟಿಯಾಗಲಿದ್ದು, ಇಂದೇ ವಿಪಕ್ಷ ನಾಯಕ ಯಾರಾಗಲಿದ್ದಾರೆ ಎನ್ನುವ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಬಿಜೆಪಿ ಸೋಲಿನ ಸಂಪೂರ್ಣ ಹೊಣೆ ಹೊತ್ತಿರುವ ಬೊಮ್ಮಾಯಿ ವಿಪಕ್ಷ ನಾಯಕನ ಸ್ಥಾನ ಕೇಳುವ ಸಾಧ್ಯತೆ ಕಡಿಮೆ ಇದೆ. ತಮಗೆ ಸ್ಥಾನ ಕೇಳುವ ಬದಲು ಸೂಕ್ತ ವ್ಯಕ್ತಿಗೆ ಸ್ಥಾನ ನೀಡಿ, ಆದರೆ ಶೀಘ್ರವೇ ನಾಯಕನ ಆಯ್ಕೆ ಮಾಡಿ ಎಂದು ಮನವಿ ಮಾಡಲಿದ್ದಾರೆ.