ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸಿಎಂಗೆ ಧಮ್ಮಿದ್ರೆ, ತಾಕತ್ತಿದ್ರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಿಸಿ. 5 ಕೆಜಿ ಜೊತೆಗೆ 10 ಕೆಜಿ ಸೇರಿಸಿ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇಂದು ನಗರದ ಆನಂದ ರಾವ್ ವೃತ್ತದ ಬಳಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಒಂದು ಕುಟುಂಬದಲ್ಲಿ 5 ಜನರಿದ್ದರೆ 75 ಕೆಜಿ ಕೊಡಬೇಕು. ಅದನ್ನು ಮಾಡದೆ ಪ್ರತಿಭಟಿಸುತ್ತೀರಾ? ನಿಮಗೆ ಅಧಿಕಾರ ಕೊಟ್ಟದ್ದು ಪ್ರತಿಭಟನೆ ಮಾಡಲೆಂದೇ? ಎಂದು ಪ್ರಶ್ನಿಸಿದರು.
ಸುಳ್ಳ ಮಳ್ಳ ಸರಕಾರ
ಇದೊಂದು ಸುಳ್ಳ- ಮಳ್ಳ ಸರಕಾರ. ಸುಳ್ಳು ಹೇಳುವುದು ಮತ್ತು ಮೋಸ ಮಾಡುವ ಸರಕಾರವಿದು. ನಿಮಗೆ ನಾಚಿಕೆ ಇಲ್ಲವೇ? ಜವಾಬ್ದಾರಿ ಇಲ್ಲವೇ? ಎಂದು ಕೇಳಿದರಲ್ಲದೆ, ಇದೊಂದು ಬೇಜವಾಬ್ದಾರಿ ಸರಕಾರ ಎಂದು ಟೀಕಿಸಿದರು.
ಕರೆಂಟ್ ಶಾಕ್ ಕೊಟ್ಟ ಸರಕಾರ
ರಾಜ್ಯ ಸರಕಾರ ಕರೆಂಟ್ ಶಾಕ್ ಕೊಡುತ್ತಿದೆ. ಇವತ್ತು ಇವರು ಕೊಟ್ಟ ಬಿಲ್ಲನ್ನು ಬಡವರು, ಕೈಗಾರಿಕೆದಾರರು ಸೇರಿ ಯಾರಿಗೂ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸರಕಾರವೇ ವಿದ್ಯುತ್ ದರ ಏರಿಸಿದ್ದು, ದುಪ್ಪಟ್ಟು ಏರಿಕೆ ಆಗಿದೆ. ಮನಸ್ಸು ಮಾಡಿದರೆ ಅದನ್ನು ಏರಿಸದೆ ಇರಬಹುದಿತ್ತು. ಯಾಕೆ ಸ್ವಾಮೀ ಬಡವರ ಬಗ್ಗೆ ಮಾತನಾಡಿ ಅಧಿಕಾರ ಪಡೆದ ನೀವು ಬಡವರಿಗೆ ಮೋಸ ಮಾಡ್ತ ಇದ್ದೀರಿ ಎಂದು ಟೀಕಿಸಿದರು.
ರಾಜ್ಯದ ಪ್ರಗತಿ ಹಳಿ ತಪ್ಪಿದೆ
ಮುಂದೆ ಬಸ್‍ಗಳ ಸಂಚಾರ ನಿಂತು ಹೋಗಲಿವೆ. ಶಾಲಾ ಮಕ್ಕಳಿಗೆ ಬಸ್ಸಿಲ್ಲದೆ ಮುಷ್ಕರ ಮಾಡುತ್ತಿದ್ದಾರೆ. ಒಂದೆಡೆ ಬಸ್ಸುಗಳು ನಿಲ್ಲುತ್ತಿವೆ. ಇನ್ನೊಂದೆಡೆ ವಿದ್ಯುತ್ ಶಾಕ್‍ನಿಂದ ಕೈಗಾರಿಕೆಗಳು ನಿಲ್ಲಲಿವೆ. ಕುಡಿಯುವ ನೀರೂ ಸಿಗುತ್ತಿಲ್ಲ. ಕೇವಲ ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿ ಹಳಿ ತಪ್ಪಿದೆ. ಕೆಲಸಗಳ ಹಣ ಪಾವತಿ ಆಗುತ್ತಿಲ್ಲ. ಕಾಂಗ್ರೆಸ್ ಕಮಿಷನ್ ನಿಗದಿಪಡಿಸಲು ಸಚಿವರು ಮುಂದಾಗಿದ್ದಾರೆ. ಅಧಿಕಾರಿಗಳನ್ನು ಕರೆದು ಮಂತ್ಲಿ ಫಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ದಂಧೆ ಶುರು
ಕಾಂಗ್ರೆಸ್ ದಂಧೆ ಶುರುವಾಗಿದೆ. ಇದೊಂದು ಜನವಿರೋಧಿ, ಬಡವರ ವಿರೋಧಿ, ರೈತರ ವಿರೋಧಿ ಸರಕಾರ ಎಂದು ಟೀಕಿಸಿದರು. ನಮ್ಮನ್ನು ಬಂಧಿಸುವ ಮೂಲಕ ಪೊಲೀಸ್ ರಾಜ್ಯ ಪ್ರಾರಂಭ ಆಗಿದ್ದನ್ನು ಸಾಬೀತು ಮಾಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ದಮನಕಾರಿ ನೀತಿ ಎಂದು ತಿಳಿಸಿದರು.
ನಿಮ್ಮ ಪೊಲೀಸ್ ರಾಜ್ಯಕ್ಕೆ ಹೆದರುವುದಿಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಮ್ಮ ಹೋರಾಟ ವಿಧಾನಸಭೆ ಒಳಗೆ ಮತ್ತು ಹೊರಗೆ ಮುಂದುವರೆಯಲಿದೆ ಎಂದರು.
ಜನರಿಗೆ ನೆರವಿಗೆ ನಿಂತಿರುವುದು ಕೇಂದ್ರ ಸರ್ಕಾರ
10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಆದರೆ ಇವರ ಕೈಯಲ್ಲಿ ಒಂದು ಕೆಜಿ ಅಕ್ಕಿ ಕೊಡಲು ಸಾಧ್ಯವಾಗಿಲ್ಲ. 5 ಕೆಜಿ ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿಯವರ ಕೇಂದ್ರ ಸರಕಾರ ಎಂದು ವಿವರಿಸಿದರು. ಬಡವರಿಗೆ ಈಗ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. 10 ಕೆಜಿ ಅಕ್ಕಿಯನ್ನು ಗರೀಬ್ ಕಲ್ಯಾಣ್ ಯೋಜನೆಯಡಿ ಸುಮಾರು 2 ವರ್ಷ ಕೊಟ್ಟಿದ್ದಾರೆ. ಈ ಸುಳ್ಳು ಕಾಂಗ್ರೆಸ್ಸಿನಿಂದ ನಾವು ಪಾಠ ಕಲಿಯಬೇಕಿಲ್ಲ. ಕೋವಿಡ್, ಅಕ್ಕಿ ವಿತರಣೆ, ಪ್ರವಾಹ ಬಂದಾಗ ಕೇಂದ್ರವು ನೆರವಿಗೆ ಧಾವಿಸಿದೆ ಎಂದು ವಿವರಿಸಿದರು.
ಅಧಿಕಾರಕ್ಕಾಗಿ ಸುಳ್ಳು ಭರವಸೆ
ಆಪತ್ತು ಬಂದಾಗ ಆಪತ್ ಬಾಂಧವನಾಗಿ ನರೇಂದ್ರ ಮೋದಿಯವರು ಬಂದಿದ್ದರು. ಜನರು ನಿಮ್ಮ ಸುಳ್ಳು ಭರವಸೆ, ಸುಳ್ಳು ಗ್ಯಾರಂಟಿಗಳ ಜೊತೆ ಸುಳ್ಳು ನೆಪವನ್ನು ಗಮನಿಸಿದ್ದಾರೆ. ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಎಂದಿದ್ದರು. ತಾತ್ವಿಕ ಒಪ್ಪಿಗೆ ನಂತರ ಜುಲೈ 1ರಿಂದ ಎಂದು ಸುಳ್ಳು ಹೇಳಿದ್ದಾರೆ. ಆಗಲೂ ತಯಾರಿ ಮಾಡಲೇ ಇಲ್ಲ. ಈಗ ಕೇಂದ್ರ ಅಕ್ಕಿ ಕೊಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದೀರಿ. ಕೇಂದ್ರ ತನ್ನ ಪಾಲನ್ನು ಕೊಟ್ಟಿದೆ ಎಂದು ತಿಳಿಸಿದರು.