ಹೊಸದಿಗಂತ ಬೀದರ್:
ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಸಾಹಸ ಮತ್ತು ದೇಶಪ್ರೇಮವು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದರು.
ಗುರುವಾರ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
“ಅಲ್ಪ ಪ್ರಾಯದಲ್ಲೇ ಸ್ವರಾಜ್ಯ ಸ್ಥಾಪಿಸಿದ ಶಿವಾಜಿ ಅವರು ಕೇವಲ ಸಮರವೀರನಲ್ಲ, ಸ್ತ್ರೀ ಗೌರವ ಹಾಗೂ ರೈತ ಹಿತ ಕಾಯುವ ಜನಪರ ಆಡಳಿತಗಾರರಾಗಿದ್ದರು. ಅವರ ಸೈನ್ಯದಲ್ಲಿ ಅನೇಕ ಮುಸ್ಲಿಂ ಯೋಧರಿದ್ದರು. ಇತಿಹಾಸದ ಸತ್ಯಾಂಶಗಳನ್ನು ಅರಿಯುವ ಜವಾಬ್ದಾರಿ ನಮ್ಮ ಮೇಲಿದೆ. ಮರಾಠಾ ಸಮಾಜದ ಏಳಿಗೆಗೆ ಸರ್ಕಾರ ಸದಾ ಬದ್ಧವಾಗಿದೆ” ಎಂದರು.
ಬೀದರ್ ಸಂಸದ ಸಾಗರ ಖಂಡ್ರೆ ಮಾತನಾಡಿ, ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಶಿವಾಜಿಯವರ ಕೆಚ್ಚೆದೆಯನ್ನು ಅನುಸರಿಸಬೇಕು ಎಂದರು. ಇದೇ ವೇಳೆ ಮರಾಠಾ ಸಮುದಾಯ ಭವನ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ಅವರು ಘೋಷಿಸಿದರು.
ಪುಣೆಯ ಮರಾಠಾ ಸೇವಾ ಸಂಘದ ಪ್ರಮುಖರಾದ ಗಂಗಾಧರ್ ಬನಬಾರೆ ಮಾತನಾಡಿ, “ಶಿವಾಜಿ ಮಹಾರಾಜರನ್ನು ಒಂದು ಧರ್ಮ ಅಥವಾ ಭಾಷೆಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಸಮಾಜದ ಅಮೂಲ್ಯ ಆಸ್ತಿ. ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಅವಿನಾಭಾವ ಸಂಬಂಧವಿದ್ದು, ಬೆಂಗಳೂರಿನಲ್ಲೇ ಅವರು ಸ್ವರಾಜ್ಯದ ಪ್ರಾಥಮಿಕ ಶಿಕ್ಷಣ ಪಡೆದಿದ್ದರು” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ವೃತ್ತಗಳ ಮೂಲಕ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



