ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಡೇವಿಡ್ ವಾರ್ನರ್, ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಯ್ನಾಡು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಪಿಎಸ್ಎಲ್ ಪಂದ್ಯಾವಳಿ ನಡೆಯುತ್ತಿರುವಾಗಲೇ ಬಿಡುವು ಮಾಡಿಕೊಂಡು ಸಿಡ್ನಿಗೆ ತೆರಳಿದ್ದ ವಾರ್ನರ್, ಏಪ್ರಿಲ್ 7, 2026 ರಂದು ಮರೂಬ್ರಾ ಎಂಬಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ತಪಾಸಣೆಗಾಗಿ ಅವರ ಕಾರನ್ನು ತಡೆದಿದ್ದಾರೆ. ಈ ವೇಳೆ ನಡೆಸಿದ ಬ್ರೀತ್ ಅನಲೈಸರ್ ಪರೀಕ್ಷೆಯಲ್ಲಿ ವಾರ್ನರ್ ಮದ್ಯ ಸೇವಿಸಿರುವುದು ದೃಢಪಟ್ಟಿದೆ.
ಪೊಲೀಸರ ತಪಾಸಣೆ ವೇಳೆ ವಾರ್ನರ್ ಅವರ ರಕ್ತದಲ್ಲಿ ಮದ್ಯದ ಪ್ರಮಾಣ 0.104 ರಷ್ಟು ಕಂಡುಬಂದಿದೆ. ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿ 0.05 ಆಗಿದ್ದು, ವಾರ್ನರ್ ಅದರ ಎರಡರಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿ ಗಾಡಿ ಓಡಿಸುತ್ತಿದ್ದರು ಎನ್ನಲಾಗಿದೆ. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧನದ ನಂತರ ವಾರ್ನರ್ ಅವರು ವಕೀಲರ ಸಹಾಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಆದರೆ, ಈ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮುಂದಿನ ತಿಂಗಳು ಆಸ್ಟ್ರೇಲಿಯಾದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾಗಿರುವ ಡೇವಿಡ್ ವಾರ್ನರ್ ಕೂಡಲೇ ಪಾಕಿಸ್ತಾನಕ್ಕೆ ಹಾರಲಿದ್ದಾರೆ. ಏಪ್ರಿಲ್ 9 ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೆಶಾವರ್ ಝಲ್ಮಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಕರಾಚಿ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.



