ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಬೌಲಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ನಿಷೇಧ ಹೇರಿದೆ.
ಬೌಲಿಂಗ್ ವೇಳೆ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿದ ಹಿನ್ನೆಲೆಯಲ್ಲಿ ಶಕೀಬ್ ಬೌಲಿಂಗ್‌ಗೆ ನಿಷೇಧ ಹೇರಲಾಗಿದೆ. ಇದು ಐಸಿಸಿಯ ದೇಶೀಯ ಮತ್ತು ವಿದೇಶದಲ್ಲಿ ನಡೆಯಲಿರುವ ಪಂದ್ಯಗಳಿಗೆ ಅನ್ವಯವಾಗಲಿದೆ.
ಡಿಸೆಂಬರ್‌ನಲ್ಲಿ ಇಂಗ್ಲೆಂಡಿನ ಲೌಬರೋ ವಿಶ್ವವಿದ್ಯಾನಿಲಯದಲ್ಲಿ ದಿನನಿತ್ಯದ ಮೌಲ್ಯಮಾಪನದ ನಂತರ, ಬೌಲಿಂಗ್ ಮಾಡುವಾಗ ಶಕೀಬ್ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿರುವುದು ಕಂಡುಬಂದಿದೆ. ಐಸಿಸಿ ನಿಯಮದ ಪ್ರಕಾರ ಬೌಲಿಂಗ್ ವೇಳೆ ಮೊಣಕೈ ವಿಸ್ತರಣೆಯು 15 ಡಿಗ್ರಿ ಮಿತಿಯನ್ನು ಮೀರುವಂತಿಲ್ಲ.ಯಾವುದೇ ಬೌಲರ್‌ನ ಮೊಣಕೈ ಈ ಮಿತಿಯನ್ನು ಮೀರಿ ವಿಸ್ತರಿಸಿದರೆ ಕಾನೂನುಬಾಹಿರ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸ್ವತಂತ್ರವಾಗಿ ಮೌಲ್ಯಮಾಪನ ನಡೆಸಿ ಶಕೀಬ್ ಅವರ ಬೌಲಿಂಗ್ ಐಸಿಸಿ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಖಚಿತಪಡಿಸಿದೆ. ವರದಿ ಬಂದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳನ್ನು ಒಳಗೊಂಡಿರುವ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಟೂರ್ನಿಗಳಲ್ಲಿ ಬೌಲಿಂಗ್‌ನಿಂದ ಅವರನ್ನು ಅಮಾನತುಗೊಳಿಸುವುದಾಗಿ ಇಸಿಬಿ ಘೋಷಿಸಿತು.
ಬಾಂಗ್ಲಾದೇಶದ ಹೊರಗೆ ಐಸಿಸಿ-ಅನುಮೋದಿತ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬೌಲಿಂಗ್‌ನಿಂದ ಶಕೀಬ್ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ದೃಢಪಡಿಸಿದೆ.