ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ‘ಧುರಂಧರ್’ ಸಿನಿಮಾಗಿಂತಲೂ ಇದೀಗ ಅದರ ಒಟಿಟಿ ಬಿಡುಗಡೆ ವಿಚಾರವೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾವ ಪ್ಲಾಟ್‌ಫಾರ್ಮ್ ಪಡೆದುಕೊಂಡಿದೆ, ಎಷ್ಟು ಮೊತ್ತಕ್ಕೆ ಒಪ್ಪಂದವಾಗಿದೆ ಮತ್ತು ಯಾವಾಗ ಸ್ಟ್ರೀಮಿಂಗ್ ಶುರುವಾಗಲಿದೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿವೆ.
ರಣವೀರ್ ಸಿಂಗ್ ಅಭಿನಯದ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನೆಟ್‌ಫ್ಲಿಕ್ಸ್ ಒಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬುದು ಬಹುತೇಕ ಖಚಿತವಾಗಿದೆ. ಆದರೆ ಒಪ್ಪಂದದ ಮೊತ್ತದ ಬಗ್ಗೆ ಮಾತ್ರ ಇನ್ನೂ ಸ್ಪಷ್ಟತೆ ಇಲ್ಲ. ಆರಂಭದಲ್ಲಿ ಡಿಜಿಟಲ್ ಡೀಲ್ ರೂ.130 ಕೋಟಿಗೆ ಆಗಿದೆ ಎಂಬ ವರದಿಗಳು ಬಂದಿದ್ದರೆ, ಇತ್ತೀಚೆಗೆ ಆ ಮೊತ್ತ ರೂ.285 ಕೋಟಿವರೆಗೆ ಏರಿದೆ ಎಂಬ ಹೊಸ ಮಾಹಿತಿ ಹರಿದಾಡುತ್ತಿದೆ. ಈ ಕುರಿತು ನಿರ್ಮಾಣ ತಂಡ ಅಥವಾ ನೆಟ್‌ಫ್ಲಿಕ್ಸ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಸ್ಟ್ರೀಮಿಂಗ್ ಸಮಯದ ವಿಚಾರಕ್ಕೆ ಬಂದರೆ, ಚಿತ್ರಮಂದಿರ ಬಿಡುಗಡೆ ಬಳಿಕ ಕನಿಷ್ಠ ಎಂಟು ವಾರಗಳ ಗ್ಯಾಪ್ ನೀಡುವ ಒಪ್ಪಂದವಿದೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ, ಜನವರಿ 30ರ ಬಳಿಕ ‘ಧುರಂಧರ್’ ಒಟಿಟಿಗೆ ಬರಬಹುದೆಂಬ ಅಂದಾಜು ಕೇಳಿಬರುತ್ತಿದೆ. ತೆಲುಗು ಸೇರಿದಂತೆ ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಯೂ ಒಟಿಟಿಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

