February 2, 2026
Monday, February 2, 2026
spot_img

SHOCKING | ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ BWSSB ಸಂಪ್ ನಲ್ಲಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಜಲಮಂಡಳಿ ಪೈಪ್‌ಲೈನ್‌ನ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ. ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಪೈಪ್‌ಲೈನ್ ಅಳವಡಿಕೆಗಾಗಿ ನಿರ್ಮಿಸಿದ್ದ ತೆರೆದ ಸಂಪ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ.

ಈ ದುರ್ಘಟನೆಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ. ಪೈಪ್‌ಲೈನ್‌ಗಾಗಿ ತೆಗೆಯಲಾಗಿದ್ದ ಸಂಪ್‌ ಅನ್ನು ಮುಚ್ಚಿರಲಿಲ್ಲ. ಬಾಲಕ ಓಡಾಡುವ ವೇಳೆ ಆಕಸ್ಮಿಕವಾಗಿ ಸಂಪ್‌ಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾತಗುಣಿಯ ಬಾಡಿಗೆ ಮನೆಯಲ್ಲಿ ರಜನಿಕಾಂತ್‌ ಕುಟುಂಬ ವಾಸವಿದೆ. ಪ್ರೀತಮ್ ಮೂರು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವನು ವಾಪಸ್‌ ಬಂದಿರಲಿಲ್ಲ. ಈ ಸಂಬಂಧ ಪೋಷಕರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಭಾನುವಾರ ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !