ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನಟಿ ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದು, ಭಯೋತ್ಪಾದಕರನ್ನು ‘ಮೃಗಗಳ ಗುಂಪು’ ಎಂದು ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ಗೆ ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
ಟೀಕೆಗೆ ಕಾರಣ ಏನು ಅಂದರೆ ಸಾಯಿ ಪಲ್ಲವಿ ಈ ಹಿಂದೆ ಸಂದರ್ಶನವೊಂದರಲ್ಲಿ ಕಾಶ್ಮೀರದ ಪಂಡಿತರ ಹತ್ಯೆ ಮತ್ತು ಗೋವುಗಳನ್ನು ಸಾಗಿಸುವವರ ಹತ್ಯೆ ಬಗ್ಗೆ ಹೋಲಿಸಿ ಮಾತನಾಡಿದ್ದರಿಂದ ವಿವಾದಕ್ಕೆ ಗುರಿಯಾಗಿದ್ದರು.
ಜೊತೆಗೆ 2022ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ಅವರು ‘ಪಾಕಿಸ್ತಾನದಲ್ಲಿ ಜನರು ನಮ್ಮ ಸೇನೆಯನ್ನು ಭಯೋತ್ಪಾದಕರ ಗುಂಪು ಎಂದು ಭಾವಿಸುತ್ತಾರೆ. ಆದರೆ ನಮ್ಮ ದೃಷ್ಟಿಯಲ್ಲಿ, ಅದು ಅವರೇ. ಆದ್ದರಿಂದ, ದೃಷ್ಟಿಕೋನ ಬದಲಾಗುತ್ತದೆ. ನಾವು ಹಿಂಸೆಯನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.
ಇದೀಗ ನಟಿ ಸಾಯಿ ಪಲ್ಲವಿ ಅವರು ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧದ ಕುರಿತು ತುಂಬಾ ಬೇಸರ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಹಿಂದಿನ ಹೇಳಿಕೆಯನ್ನು ನೆನೆಸಿಕೊಂಡು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ #BoycottSaiPallavi ಎಂಬ ಹ್ಯಾಶ್‌ಟ್ಯಾಗ್‌ನ್ನು ಟ್ರೆಂಡ್ ಮಾಡಿದ್ದಾರೆ.