ಕೂದಲು ಬಿಟ್ಟುಕೊಂಡಿರುವ ಹುಡುಗಿಯರಿಗಿಂತ ಲಕ್ಷಣವಾಗಿ ಜಡೆ ಹೆಣೆದುಕೊಂಡಿರುವವರು ಬೇಗ ಗಮನ ಸೆಳೆಯುತ್ತಾರೆ ಹೌದಲ್ವಾ. ನಮ್ಮ ಸಂಸ್ಕೃತಿಯಲ್ಲಿಯೇ ಜಡೆ ಹಾಕುವುದು ಒಂದು ಆಕರ್ಷಣೆ. ವಿಶೇಷವಾಗಿ ಸಭೆ ಸಮಾರಂಭಗಳಲ್ಲಿ ಜಡೆಗೆ ಹೂ ಮುಡಿದರೆ ಹೆಣ್ಣುಮಕ್ಕಳನ್ನು ನೋಡೋದೇ ಒಂದು ಹಬ್ಬ. ಆದರೆ ಜಡೆ ಹಾಕುವುದು ಕೇವಲ ಅಲಂಕಾರಕ್ಕೆ ಮಾತ್ರವಲ್ಲ. ಪ್ರತಿದಿನವೂ ಜಡೆ ಹಾಕುವ ಅಭ್ಯಾಸ ನಿಮ್ಮ ಕೂದಲು ಮತ್ತು ಆರೋಗ್ಯಕ್ಕೆ ಕೂಡ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ?.
ಜಡೆ ಕೂದಲಿನ ತೇವಾಂಶವನ್ನು ಕಾಪಾಡುತ್ತದೆ
ಕೂದಲು ಜಡೆ ಹಾಕಿದರೆ ಅದರ ನೈಸರ್ಗಿಕ ತೇವಾಂಶ ಕಳೆದುಕೊಳ್ಳುವುದಿಲ್ಲ. ಇದು ವಾತಾವರಣದ ಬದಲಾವಣೆಗಳ ಪರಿಣಾಮದಿಂದ ಕೂದಲು ಒಣಗುವುದನ್ನು ತಪ್ಪಿಸುತ್ತದೆ, ಹಾಗೆಯೇ ಕೂದಲನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ.
ನೆತ್ತಿಯ ಚರ್ಮದ ಆರೈಕೆಗೂ ಸಹಕಾರಿ
ಕೂದಲು ಆರೋಗ್ಯವಾಗಿರಲು ನೆತ್ತಿಯ ಚರ್ಮವೂ ಚೆನ್ನಾಗಿರಬೇಕು. ಪ್ರತಿದಿನ ಎಣ್ಣೆ ಹಚ್ಚಿ ಜಡೆ ಹಾಕಿದರೆ ತಲೆಚರ್ಮ ಒಣಗುವುದಿಲ್ಲ. ಇದರೊಂದಿಗೆ ತುರಿಕೆ, ತಲೆಹೊಟ್ಟು, ಶಿಲೀಂಧ್ರ ಸಮಸ್ಯೆಗಳಿಂದ ನಿಮ್ಮ ತಲೆ ದೂರವಾಗಿರುತ್ತದೆ.
ಕೂದಲು ಉದುರುವಿಕೆ ಕಡಿಮೆ
ತಾಪಮಾನ, ಗಾಳಿಯ ಮಾಲಿನ್ಯ ಮತ್ತು ಬಿಸಿಲಿನಿಂದ ಕೂದಲಿಗೆ ಸಿಕ್ಕಾಪಟ್ಟೆ ತೊಂದರೆ ಆಗುತ್ತೆ. ಅದಕ್ಕೆ ಜಡೆ ಹಾಕಿದರೆ ಕೂದಲು ಒಂದು ಸ್ಥಾನದಲ್ಲೇ ಇರುತ್ತದೆ. ಇದರಿಂದ ಕೂದಲು ಉದುರುವುದು, ಡ್ಯಾಮೇಜ್ ಆಗೋದು ಕಡಿಮೆಯಾಗಿ. ಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ.
ಕೂದಲು ಬೆಳವಣಿಗೆಗೆ ಉತ್ತೇಜನ
ನಿರಂತರವಾಗಿ ಜಡೆ ಹಾಕುವುದು ಕೂದಲಿನ ಒತ್ತಡವನ್ನು ನಿಯಂತ್ರಿಸುತ್ತದೆ. ಇದು ಕೂದಲಿನ ತುದಿಗಳಿಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ, ಹೀಗಾಗಿ ಕೂದಲು ಬೆಳೆಯಲು ಸಹಾಯವಾಗುತ್ತದೆ. ಆದರೆ ಜಡೆ ಬಿಗಿಯಾಗಿ ಹಾಕಬಾರದು; ಸಡಿಲವಾಗಿ ಹಾಕುವುದು ಆರೋಗ್ಯಕರ.
ಹಬ್ಬಗಳಿಗೆ ಅಥವಾ ವಿಶೇಷ ಸಂದರ್ಭಗಳಿಗೆ ಮಾತ್ರವಲ್ಲ, ಪ್ರತಿದಿನವೂ ಜಡೆ ಹಾಕಿಕೊಳ್ಳುವುದರಿಂದ ನಿಮ್ಮ ಕೂದಲು ಸುಂದರ, ಆರೋಗ್ಯಕರವೂ ಆಗುತ್ತದೆ. ಜೊತೆಗೆ ಒಟ್ಟಾರೆ ತಲೆಚರ್ಮದ ಆರೋಗ್ಯವೂ ಉತ್ತಮವಾಗಿರುತ್ತದೆ. ಇದು ಸಾಮಾನ್ಯ ಆರೋಗ್ಯ ಸಂಬಂಧಿತ ಮಾಹಿತಿ ಮಾತ್ರ. ತಲೆಚರ್ಮ ಅಥವಾ ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅನುಭವಿಸುತ್ತಿದ್ದರೆ, ದಯವಿಟ್ಟು ತಜ್ಞ ವೈದ್ಯರನ್ನು ಸಂಪರ್ಕಿಸಿ.