Thursday, November 6, 2025

ಆನ್‌ಲೈನ್ ಡೆಲಿವರಿ ಏಜೆಂಟ್‌ನಿಂದ ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಖರೀದಿ ಸೇವೆಗಳ ಡೆಲಿವರಿ ಏಜೆಂಟ್‌ಗಳಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮುಂಬೈ ನಂತರ ಈಗ ಬೆಂಗಳೂರಿನಲ್ಲಿ ಇದೇ ರೀತಿಯ ಅಘಾತಕಾರಿ ಘಟನೆ ವರದಿಯಾಗಿದೆ. ಬ್ರೆಜಿಲ್ ಮೂಲದ ಯುವ ಮಾಡೆಲ್‌ ಒಬ್ಬರಿಗೆ ಡೆಲಿವರಿ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಬಂಧನಕ್ಕೊಳಗಾಗಿದ್ದಾನೆ.

ಅಕ್ಟೋಬರ್ 17ರಂದು ಮಧ್ಯಾಹ್ನ 3.30ರ ಸುಮಾರಿಗೆ ಸುಲ್ತಾನ್‌ಪಾಳ್ಯದ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಬ್ರೆಜಿಲ್ ಮೂಲದ ಮಾಡೆಲ್ ಆನ್‌ಲೈನ್ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ವಸ್ತುಗಳನ್ನು ತಲುಪಿಸಲು ಬಂದ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಕುಮಾರ್ ರಾವ್ ಪವಾರ್, ಪಾರ್ಸೆಲ್ ನೀಡುವ ನೆಪದಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.

ಅನಿರೀಕ್ಷಿತ ಕೃತ್ಯದಿಂದ ಬೆಚ್ಚಿಬಿದ್ದ ಯುವತಿ ತಕ್ಷಣ ಆರೋಪಿಯನ್ನು ಹೊರಗೆ ತಳ್ಳಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಬಳಿಕ ಈ ಕುರಿತು ಆಕೆ ತನ್ನ ಫ್ಲ್ಯಾಟ್‌ಮೇಟ್‌ಗಳಿಗೆ ಘಟನೆ ವಿವರಿಸಿದ್ದು, ವಿಷಯ ಸಂಸ್ಥೆಯ ನಿರ್ವಹಣೆಗೆ ತಲುಪಿದೆ. ಸಂಸ್ಥೆಯವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಘಟನೆ ನಿಜ ಎಂಬುದು ದೃಢಪಟ್ಟಿದೆ.

ಯುವತಿಯ ಸಹೋದ್ಯೋಗಿಯೊಬ್ಬರ ದೂರಿನ ಮೇರೆಗೆ ಆರ್‌ಟಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿಯನ್ನು ಅದೇ ದಿನ ಬಂಧಿಸಿದ್ದಾರೆ. ಆರೋಪಿಯು ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಬ್ಲಿಂಕಿಟ್‌ನಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

error: Content is protected !!