ಕರ್ನಾಟಕದಲ್ಲಿ ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್‌ಗೆ ಬ್ರೇಕ್: ಹೊಸ ಮಸೂದೆಗೆ ಸರ್ಕಾರ ರೆಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ತರಲು ಕರ್ನಾಟಕ ಸರ್ಕಾರ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025’ರ ಕರಡು ಸಿದ್ಧಗೊಂಡಿದ್ದು, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮಂಡನೆಗೆ ಸರ್ಕಾರ ತಯಾರಿ ನಡೆಸುತ್ತಿದೆ.

ಈ ಹೊಸ ಮಸೂದೆಯಲ್ಲಿ ‘ಗೇಮ್ ಆಫ್ ಚಾನ್ಸ್’ ಎಂಬ ಅಂಶಕ್ಕೆ ಹೆಚ್ಚು ಒತ್ತಡ ನೀಡಲಾಗಿದೆ. ಅಂದರೆ, ಫಲಿತಾಂಶಗಳು ಸಂಪೂರ್ಣವಾಗಿ ಅಥವಾ ಭಾಗಶಃ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಯಾವುದೇ ಆಟ, ಸ್ಪರ್ಧೆ ಅಥವಾ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾವನೆ ಇದೆ. ಡಿಜಿಟಲ್ ವೇದಿಕೆಗಳಲ್ಲಿ ಹಣ, ಟೋಕನ್, ವರ್ಚುವಲ್ ಕರೆನ್ಸಿ ಅಥವಾ ಇ-ಫಂಡುಗಳ ಮೂಲಕ ನಡೆಯುವ ಬೆಟ್ಟಿಂಗ್, ಪಂಥ ಕಟ್ಟುವ ಆಟಗಳು ಕಾನೂನಾತ್ಮಕವಾಗಿ ನಿಷಿದ್ಧವಾಗಲಿವೆ.

ಇದೇ ಅಲ್ಲದೆ, ಈ ರೀತಿಯ ಚಟುವಟಿಕೆಗಳನ್ನು ನೋಂದಾಯಿತವಲ್ಲದ ಆಪ್, ವೆಬ್‌ಸೈಟ್ ಅಥವಾ ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸುವುದು ಸಹ ಕಾನೂನು ಬಾಹಿರವಾಗಲಿದೆ.

ಮಸೂದೆಯ ಮಹತ್ವದ ಭಾಗವೆಂದರೆ, ‘ಕರ್ನಾಟಕ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ’ವನ್ನು ರಚಿಸಲು ಅವಕಾಶವಿದೆ. ಈ ಪ್ರಾಧಿಕಾರ ನೂತನ ಕಾನೂನು ಜಾರಿಗೆ ನಿಗಾ ಇಡುವುದಲ್ಲದೆ, ನಿಯಮ ಉಲ್ಲಂಘನೆಗೊಳಗಾದ ಘಟನೆಗಳನ್ನು ಪರೀಕ್ಷಿಸಿ ಕ್ರಮಕೈಗೊಳ್ಳಲಿದೆ.

ಈ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕಾನೂನು, ಸಾರ್ವಜನಿಕ ಆಡಳಿತ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವ ಹೊಂದಿರುವವರನ್ನು ನೇಮಕ ಮಾಡುವ ಅವಕಾಶ ಸರ್ಕಾರಕ್ಕಿದೆ. ಜೊತೆಗೆ ಮೂವರು ಸದಸ್ಯರನ್ನು ಸಹ ನೇಮಿಸಲಾಗುವುದು.

ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ
ಮಸೂದೆಯ ಪ್ರಕಾರ, ಹೊಸ ನಿಯಮ ಉಲ್ಲಂಘಿಸಿದರೆ 3 ವರ್ಷವರೆಗೆ ಜೈಲು ಶಿಕ್ಷೆ ಅಥವಾ 5 ಲಕ್ಷದವರೆಗೆ ದಂಡ ವಿಧಿಸುವ ಜತೆಗೆ, ಅಗತ್ಯವಿದ್ದರೆ ಎರಡೂ ಶಿಕ್ಷೆಗಳು ಜಾರಿ ಮಾಡಬಹುದಾಗಿದೆ. ಈ ಮೂಲಕ ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ಚಟುವಟಿಕೆಗೆ ಕಠಿಣ ಎಚ್ಚರಿಕೆಯ ಸಂದೇಶ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!