ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಷ್ಟೋ ಮಕ್ಕಳಿಗೆ ತಮ್ಮ ತಾಯಿಯ ಎದೆಹಾಲನ್ನು ಕುಡಿಯುವ ಭಾಗ್ಯ ಇರುವುದಿಲ್ಲ, ಕೆಲವು ತಾಯಂದಿರಿಗೆ ನೈಸರ್ಗಿಕವಾಗಿಯೇ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಇನ್ನು ಎಷ್ಟೋ ಕಂದಮ್ಮಗಳನ್ನು ಹೆತ್ತ ತಾಯಂದಿರು ಬಿಟ್ಟು ಹೋಗಿರುತ್ತಾರೆ. ಹೀಗಿರುವಾಗ ಮಕ್ಕಳಿಗೆ ತಾಯಿಯ ಎದೆಹಾಲಿನ ಕೊರತೆ ಉಂಟಾಗುತ್ತದೆ.
ಈ ಕೊರತೆಯನ್ನು ನೀಗಿಸಲು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಮುಂದಾಗಿದ್ದು, ಇಲ್ಲಿ ಎದೆಹಾಲಿನ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ.
ಕಾಲ ಬದಲಾಗಿದೆ, ತಾಯಂದಿರ ಆಹಾರ ಸೇವನೆ, ಲೈಫ್‌ಸ್ಟೈಲ್‌ನಿಂದಾಗಿ ಕೆಲವೊಮ್ಮೆ ಆರು ತಿಂಗಳಿಗೆಲ್ಲಾ ಹಾಲು ನಿಂತು ಹೋಗುತ್ತದೆ. ಆರು ತಿಂಗಳೊಳಗಿನ ಶೇ.46ರಷ್ಟು ಶಿಶುಗಳಿಗೆ ಸರಿಯಾಗಿ ಎದೆಹಾಲು ಸಿಗುತ್ತಿಲ್ಲ.
ವಾಣಿವಿಲಾಸ ಆಸ್ಪತ್ರೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತಧಾರೆ ಹೆಸರಿನಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪನೆಯಾಗಿದೆ.
ಆಸ್ಪತ್ರೆಯಲ್ಲಿರುವ ದಾನಿಗಳಿಂದ ಇದೀಗಾಗಲೇ 270 ಲೀಟರ್ ಎದೆಹಾಲು ಸಂಗ್ರಹವಾಗಿದ್ದು, ಆಸ್ಪತ್ರೆ ಹೊರಗಿನ ದಾನಿಗಳಿಂದ 19 ಲೀಟರ್ ಹಾಲು ದಾನ ಸಿಕ್ಕಿದೆ. ತೀವ್ರ ನಿಗಾ ಘಟಕದಲ್ಲಿರುವ ಮಕ್ಕಳಿಗೆ ನಿತ್ಯ ಒಂದೂವರೆ ಲೀಟರ್ ಹಾಲು ನೀಡಲಾಗುತ್ತದೆ.
ಎದೆಹಾಲನ್ನು ಪಾಶ್ಚೀಕರಿಸಿ ಪ್ಯಾಕ್ ಮಾಡಲಾಗುತ್ತದೆ. ಇದನ್ನು 120 ಡಿಗ್ರಿ ಸೆಲ್ಶಿಯಸ್‌ನಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಆರು ತಿಂಗಳವರೆಗೂ ಈ ಹಾಲನ್ನು ಬಳಸಬಹುದಾಗಿದೆ.