January16, 2026
Friday, January 16, 2026
spot_img

ಉಸಿರಾಟಕ್ಕೂ ಸಂಚಕಾರ: 15 ಕೋಟಿ ವೆಚ್ಚದಲ್ಲಿ ಗಾಳಿ ಗುಣಮಟ್ಟ ತಪಾಸಣೆಗೆ ಬಿಬಿಎಂಪಿ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯಾನ ನಗರಿ ಬೆಂಗಳೂರು ಈಗ ‘ಮಾಲಿನ್ಯ ನಗರಿ’ಯಾಗಿ ಬದಲಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ನಗರದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಇಂದು 173ರಷ್ಟು ದಾಖಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷಿತ ಮಿತಿಗಿಂತ ಐದು ಪಟ್ಟು ಹೆಚ್ಚಿದೆ ಎಂಬುದು ಕಳವಳಕಾರಿ ಸಂಗತಿ.

ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲೇ ಈ ಬಾರಿ ಅತ್ಯಧಿಕ ಮಾಲಿನ್ಯ ಕಂಡುಬಂದಿದೆ. ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ PM2.5 ಕಣಗಳು ಗಾಳಿಯಲ್ಲಿ ಶೇ. 87ರಷ್ಟು ಹಾಗೂ PM10 ಕಣಗಳು ಶೇ. 121ರಷ್ಟು ಇವೆ. ಇವು ಅತಿ ಸೂಕ್ಷ್ಮವಾಗಿರುವುದರಿಂದ ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶ ಸೇರಿ, ಅಲ್ಲಿಂದ ರಕ್ತವನ್ನೂ ಸೇರುತ್ತಿವೆ. ಇದರಿಂದ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಲಗಾಮು ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಈಗ ಕಾರ್ಯಪ್ರವೃತ್ತವಾಗಿದೆ.

ನಗರದ 85 ಮೆಟ್ರೋ ನಿಲ್ದಾಣಗಳು, 55 ಬಿಎಂಟಿಸಿ ಬಸ್ ನಿಲ್ದಾಣಗಳು ಹಾಗೂ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಅತ್ಯಾಧುನಿಕ ಸೆನ್ಸರ್‌ಗಳನ್ನು ಅಳವಡಿಸಲಾಗುತ್ತಿದೆ.

ಪ್ರತಿ ಮಾಪನ ಯಂತ್ರಕ್ಕೆ ಅಂದಾಜು 3 ಲಕ್ಷ ರೂ. ವ್ಯಯಿಸಲಾಗುತ್ತಿದ್ದು, ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ಈ ವಾಯುಮಾಲಿನ್ಯ ತಪಾಸಣಾ ಉಪಕರಣಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

ವಾಯು ಗುಣಮಟ್ಟ ಸೂಚ್ಯಂಕವು 150 ದಾಟಿದಾಗ ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳ ಮೇಲೂ ಇದು ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ.

Must Read

error: Content is protected !!