ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಮ್ಮ ತಂಡವನ್ನು ಬಲಪಡಿಸಲು ಪ್ರಮುಖ ನಿರ್ಧಾರ ಕೈಗೊಂಡಿದೆ. ಗಾಯಗೊಂಡಿದ್ದ ವೇಗಿ ಗುರ್ಜಪ್ನೀತ್ ಸಿಂಗ್ ಬದಲಿಗೆ ಕಳೆದ ಸೀಸನ್‌ನಲ್ಲಿ ಬಂದಿದ್ದ ಸೌತ್ ಆಫ್ರಿಕಾದ ಯುವ ದಾಂಡಿಗ ಡೆವಾಲ್ಡ್ ಬ್ರೆವಿಸ್ ಅವರನ್ನು ಮುಂದಿನ ಸೀಸನ್‌ಗಳಿಗೂ ಉಳಿಸಿಕೊಳ್ಳಲು ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದೆ.
2025ರ ಐಪಿಎಲ್‌ನಲ್ಲಿ ಕೊನೆಯ ಆರು ಪಂದ್ಯಗಳಲ್ಲಿ ಅವಕಾಶ ಪಡೆದ ಬ್ರೆವಿಸ್ ಉತ್ತಮ ಪ್ರದರ್ಶನ ತೋರಿದರು. ಕೇವಲ 6 ಇನಿಂಗ್ಸ್‌ಗಳಲ್ಲಿ 125 ಎಸೆತಗಳನ್ನು ಎದುರಿಸಿ 225 ರನ್ ಬಾರಿಸಿದ ಅವರು ಎರಡು ಅರ್ಧಶತಕಗಳನ್ನು ದಾಖಲಿಸಿದ್ದರು. ಅವರ ಈ ಪ್ರದರ್ಶನದಿಂದಲೇ ಅವರನ್ನು ಮುಂದುವರಿಸಲು ತಂಡ ನಿರ್ಧರಿಸಿದೆ.
ಗುರ್ಜಪ್ನೀತ್ ಸಿಂಗ್ ಬದಲಿಗೆ ಬಂದ ಬ್ರೆವಿಸ್ ಅವರನ್ನು ಉಳಿಸಿಕೊಳ್ಳಲು ಮೂಲ ಆಟಗಾರನನ್ನು ಕೈಬಿಡಲೇಬೇಕಾಗಿತ್ತು. ಇದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುರ್ಜಪ್ನೀತ್ ಅವರನ್ನು ಬಿಡುಗಡೆ ಮಾಡಿ, ಬ್ರೆವಿಸ್ ಜೊತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. 2025 ರಿಂದ 2027ರ ಅವಧಿಗೆ ಈ ಒಪ್ಪಂದ ಜಾರಿಗೆ ಬರಲಿದೆ.
CSK ಮೂಲಗಳ ಪ್ರಕಾರ, ಬದಲಿಯಾಗಿ ಬಂದ ಆಟಗಾರರಿಗೂ ತಂಡದಲ್ಲೇ ಉಳಿಯುವ ಅವಕಾಶವಿದೆ, ಆದರೆ ಒಬ್ಬ ಆಟಗಾರನನ್ನು ಕೈ ಬಿಡಬೇಕಾಗುತ್ತದೆ. ಈ ನಿಯಮವನ್ನು ಪಾಲಿಸಿಕೊಂಡು ಸಿಎಸ್‌ಕೆ ಬ್ರೆವಿಸ್ ಅವರನ್ನು ತಮ್ಮ ತಂಡದಲ್ಲೇ ಮುಂದುವರಿಸಿದೆ.