Saturday, October 18, 2025

ಆರ್.ಟಿ.ಸಿ ದುರಸ್ತಿಗೆ ಲಂಚ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರು ಸರ್ಕಾರಿ ನೌಕರರು!

ಹೊಸದಿಗಂತ ವರದಿ ಹಾವೇರಿ :

ಆರ್.ಟಿ.ಸಿ ದುರಸ್ಥಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಜಿಲ್ಲೆಯ ಹಾನಗಲ್ ತಾಲೂಕಿನ ತಹಶೀಲ್ದಾರ ಕಛೇರಿ ಶಿರಸ್ತೆದಾರ ಹಾಗೂ ಕೇಸ್ ವರ್ಕರ್ ಬಿದ್ದಿದ್ದಾರೆ.

ಹಾನಗಲ್ಲ ತಾಲೂಕ ಬೊಮ್ಮನಹಳ್ಳಿ ಗ್ರಾಮದ ದೂರುದಾರ ನವೀನ ತಂದೆ ಬಸನಗೌಡ ಪಾಟೀಲ್ ತಮ್ಮ ಪರಿಚಯಸ್ಥರಾದ ಶಂಕ್ರಪ್ಪ ಈರಪ್ಪ ಗುಮಗುಂಡಿ ಅವರ ಕೆ.ಡಿ.ಟಿ ಪ್ರಕಾರ ದುರಸ್ಥಿ ಮಾಡಿಕೊಡಲು ಹಾನಗಲ್ ತಹಶೀಲ್ದಾರ ಕಛೇರಿಗೆ ಅರ್ಜಿ ಸಲ್ಲಿಸಿದ್ದರು.

ಹಾನಗಲ್ ತಹಶೀಲ್ದಾರ ಕಛೇರಿ ಶಿರಸ್ಥೆದಾರ ತಮ್ಮಣ್ಣ ಕಾಂಬಳೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಗೂಳಪ್ಪ ಮನಗೂಳಿ ಕೆ.ಡಿ.ಟಿ. ಪ್ರಕಾರ ದುರಸ್ಥಿ ಮಾಡಿಕೊಡಲು ರೂ. 12,000ಕ್ಕೆ ಬೇಡಿಕೆ ಇಟ್ಟು, ಶನಿವಾರ ದೂರುದಾರರಿಂದ ರೂ. 12,000/- ಗಳ ಲಂಚದ ಹಣವನ್ನು ಪಡೆದುಕೊಳ್ಳುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪ್ರಕರಣದ ಆರೋಪಿತರಿಗೆ ಸಹಕರಿಸಿದ ಮತ್ತೊಬ್ಬ ಆರೋಪಿತ ದ್ವಿತೀಯ ದರ್ಜೆ ಸಹಾಯಕ ಶಿವಾನಂದ ಬಡಿಗೇರ, ಅವರನ್ನೂ ಸಹ ವಶಕ್ಕೆ ಪಡೆಯಲಾಗಿದೆ.

ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಮಧುಸೂದನ ಸಿ, ತನಿಖಾಧಿಕಾರಿಗಳಾದ ದಾದಾವಲಿ ಕೆ ಎಚ್, ಪೊಲೀಸ್ ನಿರೀಕ್ಷಕ ವಿಶ್ವನಾಥ ಕಲ್ಲೂರಿ, ಪಿ. ವಿ. ಸಾಲಿಮಠ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಸದರಿ ಆರೋಪಿತರನ್ನು ಹಾನಗಲ್‌ ತಹಶೀಲ್ದಾರ ಕಛೇರಿಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.

error: Content is protected !!