ದಿಗಂತ ವರದಿ ಕಾರವಾರ:
ಇಲ್ಲಿನ ಕೋಡಿಭಾಗ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಬುಧವಾರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದು ಸೇತುವೆ ಮೇಲೆ ಸಂಚರಿಸುತ್ತಿದ್ದ ಲಾರಿಯೊಂದು ಕಾಳಿ ನದಿಗೆ ಬಿದ್ದಿದೆ.
ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು ಈ ಸೇತುವೆಯಲ್ಲಿ ಕಾರವಾರ ಕಡೆ ಬರುವ ವಾಹನಗಳ ಏಕ ಮುಖ ಸಂಚಾರ ನಡೆಯುತಿತ್ತು.
ಕಾಳಿ ನದಿಯಲ್ಲಿ ಬಿದ್ದ ಲಾರಿಯ ಚಾಲಕನ್ನನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣೆ ಮಾಡಲಾಗಿದ್ದು ಇನ್ನೊಂದು ಬದಿಯ ಹೊಸ ಸೇತುವೆಯ ಆರಂಭದಲ್ಲೂ ಕುಸಿತದ ಸಾಧ್ಯತೆ ಕಂಡು ಬಂದಿರುವ ಕಾರಣ ಸದ್ಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ಗೋವಾ ನಡುವೆ ಸಂಚಾರ ಸ್ಥಗಿತಗೊಂಡಿರುವುದಾಗಿ ತಿಳಿದು ಬಂದಿದೆ.
ಸೇತುವೆ ಕುಸಿತದಿಂದಾಗಿ ನದಿಗೆ ಬಿದ್ದಿದ್ದ ಲಾರಿ ಚಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಾಲಕ ಆರೋಗ್ಯದಿಂದ ಇದ್ದಾರೆ. ಕಾಳಿನದಿಯ ಮೇಲಿನ ಮತ್ತೊಂದು ಸೇತುವೆ ರಸ್ತೆಯ ದೃಢತೆಯ ಬಗ್ಗೆ ಪರಿಶೀಲನ ಪ್ರಮಾಣ ಪತ್ರವನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಾಳಿ ನದಿಯ ಹಳೆ ಸೇತುವೆ ಇದಾಗಿದ್ದು ಸುಮಾರು ಮೂರು ಕಡೆ ಕುಸಿದಿದೆ. ಇದರಿಂದ ಸಂಚಾರದ ಮೇಲೂ ವ್ಯತ್ಯಯವಾಗಲಿದ್ದು, ಗೋವಾ -ಕಾರವಾರ ಮಾರ್ಗದ ಎರಡು ಭಾಗದ ಸಂಚಾರ ವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷೀಪ್ರಿಯಾ, ಸ್ಥಳೀಯ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಂತರ ಆಸ್ಪತ್ರೆಗೆ ತೆರಳಿ ಗಾಯಾಳು ಚಾಲಕನ ಆರೋಗ್ಯ ವಿಚಾರಿಸಿ ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿ ಬಳಿ ಮಾಹಿತಿ ಪಡೆದುಕೊಂಡರು.