ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತೊಮ್ಮೆ ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪದಕಗಳನ್ನು ಗಂಗೆಯಲ್ಲಿ ಎಸೆಯಲು ಹೊರಟವರು ಏನು ಮಾಡಿದ್ದಾರೆಂದು ಪ್ರಶ್ನಿಸಿದರು. ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ಎಸೆಯಲು ಬಯಸಿದರೆ, ಅದನ್ನು ಮಾಡಬೇಕಿತ್ತು ಎಂದರು. ಇದೀಗ ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥರು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದು, ಆ ಸ್ಥಾನದಲ್ಲಿದ್ದು ಏನು ಪ್ರಯೋಜನ ಎಂಬ ಟೀಕೆಗಳು ಹರಿದು ಬರುತ್ತಿವೆ.
ಬ್ರಿಜ್ ಭೂಷಣ್ ಈ ಹಿಂದೆ ಹಲವು ಬಾರಿ ಕುಸ್ತಿಪಟುಗಳ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಯಿಂದ ತಮಗೇನೂ ನಷ್ಟವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ”ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗೆಯಲ್ಲಿ ಮುಳುಗಿಸಲು ಹೋಗಿದ್ದರು. ಆದರೆ ಅದನ್ನು ಮಾಡದೆ ತಮ್ಮ ಪದಕಗಳನ್ನು ರಾಕೇಶ್ ಟಿಕಾಯತ್ ಗೆ ನೀಡಿದರು. ಅದು ಅವರ ನಿಲುವು. ನಾವು ಏನು ಮಾಡೋಕಾಗತ್ತೆ?” ಎಂದರು.
ರಾಜೀನಾಮೆ ನೀಡುವ ಯಾವುದೇ ಉದ್ದೇಶವಿಲ್ಲ ಎಂದು ಬ್ರಿಜ್ ಭೂಷಣ್ ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ಅವರ ಅಧಿಕಾರಾವಧಿ ಮುಗಿದಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಿದರು. ತನಿಖೆ ಮಾಡಲಿ ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡೋಣ. ಈಗ ನಮ್ಮ ಕೈಯಲ್ಲಿ ಏನೂ ಇಲ್ಲ. ನಾವು ಎಲ್ಲವನ್ನೂ ದೆಹಲಿ ಪೊಲೀಸರಿಗೆ ಬಿಟ್ಟಿದ್ದೇವೆ. ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಅವರ ಕೋರಿಕೆಯ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಈಗ ತನಿಖೆ ನಡೆಯುತ್ತಿದೆ. ನಾನು ತಪ್ಪಿತಸ್ಥನೆಂದು ಕಂಡುಬಂದರೆ, ನನ್ನನ್ನು ಬಂಧಿಸಲಾಗುವುದು. ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ ಎಂದರು.
ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಹರಿದ್ವಾರದ ಹರ್ ಕಿ ಪೌರಿ ಘಾಟ್‌ನಲ್ಲಿ ಪ್ರತಿಭಟನೆ ನಡೆಸಿದರು. ಬ್ರಿಜ್ ಭೂಷಣ್ ಬಂಧಿಸಲು ದೆಹಲಿ ಜಂತರ್ ಮಂತರ್ ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಸರಕಾರ ಸ್ಪಂದಿಸದ ಕಾರಣ ತಾವು ಸಾಧಿಸಿದ ಪದಕಗಳನ್ನು ಗಂಗಾನದಿಗೆ ಎಸೆಯುತ್ತೇವೆ ಎಂದು ಮಂಗಳವಾರ ಹರಿದ್ವಾರ ತಲುಪಿದ್ದರು.