ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಕೇವಲ ಪಂದ್ಯ ಫಲಿತಾಂಶವಲ್ಲ, ಪಾಂಡ್ಯ ಸಹೋದರರ ನಡುವೆ ಕಂಡುಬಂದ ತೀವ್ರ ಸ್ಪರ್ಧಾತ್ಮಕ ಕ್ಷಣ.
ಹಾರ್ದಿಕ್ ಪಾಂಡ್ಯ ಔಟ್ ಆದ ತಕ್ಷಣ ಕೃನಾಲ್ ಪಾಂಡ್ಯ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಮತ್ತು ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 240 ರ ಭಾರೀ ಮೊತ್ತ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ಮುಂಬೈ ಉತ್ತಮ ಹೋರಾಟ ನೀಡಿದರೂ 222 ರನ್‌ಗಳಿಗೆ ಸೀಮಿತವಾಗಿ 18 ರನ್‌ಗಳಿಂದ ಸೋಲು ಕಂಡಿತು.
ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿದ್ದ ಹಾರ್ದಿಕ್ ವಿಕೆಟ್ ವೇಳೆ, ಜೇಕಬ್ ಡಫಿ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದ ಹಾರ್ದಿಕ್ ಪೆವಿಲಿಯನ್ ಕಡೆ ನಡೆದು ಹೋಗುತ್ತಿದ್ದಾಗ ಕೃನಾಲ್ ಜೋರಾಗಿ ಕುಣಿದು, ಮುಷ್ಟಿ ಬಿಗಿದು ಸಂಭ್ರಮಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಅದೇ ಕ್ಷಣ ಅಭಿಮಾನಿಗಳಲ್ಲಿ ‘ಮೈದಾನದಲ್ಲಿ ಸಹೋದರತ್ವಕ್ಕಿಂತ ಸ್ಪರ್ಧೆಯೇ ಮೇಲು’ ಎಂಬ ಚರ್ಚೆಗೆ ಕಾರಣವಾಯಿತು.
ಪಂದ್ಯಾನಂತರ ಇಬ್ಬರು ಸಹೋದರರು ಹೆಚ್ಚು ಮಾತುಕತೆ ನಡೆಸದಿರುವುದು, ಕೈಕುಲುಕದಿರುವುದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ಇದು ಕೇವಲ ಮೈದಾನದ ತೀವ್ರ ಸ್ಪರ್ಧೆಯ ಭಾಗವೇ ಅಥವಾ ಇನ್ನೇನಾದರೂ ಇದೆಯಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಒಟ್ಟಿನಲ್ಲಿ, ಈ ಪಂದ್ಯ ಕ್ರಿಕೆಟ್ ಕಾದಾಟಕ್ಕಿಂತ ಹೆಚ್ಚಾಗಿ “ಪಾಂಡ್ಯ ಬ್ರದರ್ಸ್ ಮುಖಾಮುಖಿ”ಯಾಗಿ ನೆನಪಿನಲ್ಲಿ ಉಳಿಯುವಂತಾಗಿದೆ.



