ತಂಗಿಯ ಮದುವೆಗೆ ಮಾಡಿದ್ದ ಸಾಲ ತೀರಿಸಲು ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಅಣ್ಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಂಗಿ ಮದುವೆಗೆ ಮಾಡಿಕೊಂಡಿದ್ದ ಸಾಲ ತೀರಿಸಲು ಸರ ಕಳವು ಮಾಡುತ್ತಿದ್ದ ಫುಡ್ ಡೆಲಿವರಿ ಬಾಯ್‌ನನ್ನು ಕೆಂಗೇರಿ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.

ಕೋಡಿಪಾಳ್ಯ ನಿವಾಸಿ ಸಂಜೀವ್ ಕುಮಾರ್ (32) ಬಂಧಿತ.‌ ಆರೋಪಿಯಿಂದ ರೂ.7 ಲಕ್ಷ ಮೌಲ್ಯದ 105 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಮದ್ದೂರಿನ ಕೆ.ಎಂ.ದೊಡ್ಡಿಯ ಮೂಲದ ಸಂಜೀವ್ ಕುಮಾರ್, ಕೆಲವು ವರ್ಷಗಳಿಂದ ಬೆಂಗಳೂರಿನ ಕೋಡಿಪಾಳ್ಯದಲ್ಲಿ ಪತ್ನಿ ಜತೆ ವಾಸಿಸುತ್ತಿದ್ದು, ಜೀವನ ನಿರ್ವಹಣೆಗೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ.

ಒಂದೂವರೆ ವರ್ಷಗಳ ಹಿಂದೆ ರೂ.5 ಲಕ್ಷ ಸಾಲ ಪಡೆದು ಸಹೋದರಿ ಮದುವೆ ಮಾಡಿದ್ದರು. ಆದರೆ, ನಿಗದಿತ ಸಮಯದಲ್ಲಿ ಸಾಲ ತೀರಿಸಿರಲಿಲ್ಲ. ಸಾಲಗಾರರ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಹೀಗಾಗಿ ಫುಡ್ ಡೆಲಿವರಿ ಜತೆಗೆ ಸರ ಕಳ್ಳತನ ಮಾಡುತ್ತಿದ್ದ.

ಇತ್ತೀಚೆಗೆ ಕೋಡಿಪಾಳ್ಯ ಕ್ರಾಸ್‌ನಲ್ಲಿ ಮಹಿಳೆಯೊಬ್ಬರು ಮಗಳನ್ನು ಶಾಲಾ ಬಸ್‌ಗೆ ಹತ್ತಿಸಿ ವಾಪಸ್ ಹೋಗುವಾಗ, ಎದುರಿನಿಂದ ಬೈಕ್‌ನಲ್ಲಿ ಹೋದ ಆರೋಪಿ, ಆಕೆಯ ಸರ ಕಸಿದುಕೊಂಡು ಪರಾರಿಯಾಗಿದ್ದರು. ಮಹಿಳೆ ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ಬಂಧನದಿಂದ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 4 ಸರ ಕಳವು, ಆರ್.ಆರ್.ನಗರ ಮತ್ತು ಕುಂಬಳಗೋಡು ಠಾಣೆಯಲ್ಲಿ ದಾಖಲಾಗಿದ್ದ 3 ಸರ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!