ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಎಟಾವಾ ಬಳಿ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗದಿದ್ದಕ್ಕೆ ಕೋಪಗೊಂಡ ಸಹೋದರರಿಬ್ಬರು ರೈಲಿನಲ್ಲಿ ಬಾಂಬ್ ಇದೆ ಎಂದು ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ.
ಘಟಂಪುರದವರಾದ ದೀಪಕ್ ಚೌಹಾಣ್, ಸಹೋದರ ಅಂಕಿತ್ ಬಂಧಿತ ಆರೋಪಿಗಳಾಗಿದ್ದು, ಓರ್ವ ಲುಧಿಯಾನದಲ್ಲಿ ಮೆಕ್ಯಾನಿಕ್ ಆಗಿದ್ದರೆ ಮತ್ತೊಬ್ಬ ನೋಯ್ಡಾದ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.
ದೆಹಲಿಯಲ್ಲಿ ರಾತ್ರಿ ಅಮೃತಸರ-ಕಟಿಹಾರ್ ಮಧ್ಯೆ ಸಂಚರಿಸುವ ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿದ್ದ ಇಬ್ಬರಿಗೂ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಆಸನ ಸಿಕ್ಕಿರಲಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ಆಸನಕ್ಕಾಗಿ ಇಬ್ಬರೂ ಇತರೆ ಪ್ರಯಾಣಿಕರೊಂದಿಗೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಕೋಪಗೊಂಡ ಇಬ್ಬರೂ ಹೇಗಾದರೂ ಮಾಡಿ ಸೀಟ್ ಪಡೆಯಲೇ ಬೇಕು ಎಂದು ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾರೆ. ಇದರಿಂದಾಗಿ ಪ್ರಯಾಣಿಕರ ಭಯಗೊಂಡು ರೈಲಿನಿಂದ ಇಳಿದುಬಿಡುತ್ತಾರೆ, ಬಳಿಕ ನಮಗೆ ಸೀಟ್ ಸಿಗುತ್ತದೆ ಎಂದು ಅವರು ಭಾವಿಸಿದ್ದರು.
ಬಾಂಬ್ ಸ್ಕ್ವಾಡ್, ಅಗ್ನಿಶಾಮಕ ದಳ ಸೇರಿದಂತೆ ಹಲವಾರು ಪೊಲೀಸ್ ಪಡೆಗಳು ಕಾನ್ಪುರ್ ಸೆಂಟ್ರಲ್ ನಿಲ್ದಾಣಕ್ಕೆ ದೌಡಾಯಿಸಿವೆ. ತಕ್ಷಣ ರೈಲನ್ನು ತಡೆದು ಎಲ್ಲ ಪ್ರಯಾಣಿಕರನ್ನೂ ಕೆಳಗಿಸಿ, ಪ್ರತಿಯೊಂದು ಬೋಗಿಯನ್ನು ಸುಮಾರು 40 ನಿಮಿಷಗಳ ಕಾಲ ತೀವ್ರ ತಪಾಸಣೆ ನಡೆಸಿದ್ದಾರೆ. ಯಾವುದೇ ಶಂಕಾಸ್ಪದ ವಸ್ತುಗಳು ದೊರಕದ ಹಿನ್ನೆಲೆಯಲ್ಲಿ ರೈಲು ಮುಂದಕ್ಕೆ ಚಲಿಸಲು ಅನುಮತಿಸಲಾಯಿತು.
ಆದರೆ, ಏಕಾಏಕಿ ಭಾರಿ ಸಂಖ್ಯೆಯ ಪೊಲೀಸರು ದೌಡಾಯಿಸಿದ್ದನ್ನು ಕಂಡು ಭಯಗೊಂಡ ದೀಪಕ್ ಮತ್ತು ಅಂಕಿತ್, ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಲ್ಲದೇ ಪುನಃ ರೈಲನ್ನು ಹತ್ತದೇ ಕಾನ್ಪುರದ ಫೇಥ್‌ಫುಲ್‌ಗಂಜ್ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ. ಬಳಿಕ ಈ ಹುಸಿ ಬಾಂಬ್ ಕರೆ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಶುಕ್ರವಾರ ಬೆಳಗ್ಗೆ ಆರೋಪಿಗಳು ಮೊಬೈಲ್ ಸ್ವಿಚ್ ಆನ್ ಮಾಡಿದ ಬಳಿಕ, ಲೋಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದಾರೆ.