ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ 22 ವರ್ಷದ ದಲಿತ ಯುವತಿಯೊಬ್ಬಳನ್ನು ಕ್ರೂರವಾಗಿ ಕೊಲೆ ಮಾಡಲಾಗಿದ್ದು , ಈ ಘಟನೆಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸುವ ವೇಳೆ ಅಯೋಧ್ಯೆ ಸಂಸದ ಸಮಾಜವಾದಿ ಪಾರ್ಟಿ ನಾಯಕ ಅವಧೇಶ್ ಪ್ರಸಾದ್ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಈ ವೇಳೆ ಯುವತಿಯ ಕುಟುಂಬಕ್ಕೆ ನ್ಯಾಯ ಸಿಗದೇ ಹೋದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದಾರೆ.
ದಲಿತ ಯುವತಿಯ ನಗ್ನ ಮೃತದೇಹವು ಅಯೋಧ್ಯೆ ಸಮೀಪದ ಸಹನವಾನ್ ಗ್ರಾಮ ಸಭಾದ ಸರ್ದಾರ್ ಪಟೇಲ್ ವಾರ್ಡ್‌ನ ಕಾಲುವೆಯಲ್ಲಿ ಫೆ. 1ರಂದು ಪತ್ತೆಯಾಗಿತ್ತು. ಈ ವೇಳೆ ಆಕೆಯ ಎರಡೂ ಕಣ್ಣುಗಳನ್ನು ಕಿತ್ತಿರುವುದೂ ಕಂಡು ಬಂದಿತ್ತು.
ಆಕೆಯನ್ನು ಕಾಪಾಡಲು ವಿಫಲವಾಗಿದ್ದೇನೆ
ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸದ್ಯ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
ಈ ವಿಚಾರವನ್ನು ನಾನು ಸುಮ್ಮನೆ ಬಿಡುವುದಿಲ್ಲ. ದಿಲ್ಲಿ, ಲೋಕಸಭೆಯ ತನಕ ಕೊಂಡೊಯ್ಯುತ್ತೇನೆ. ಪ್ರಧಾನಿ ಮೋದಿ ಮುಂದೆ ಪ್ರಸ್ತಾವಿಸುತ್ತೇನೆ. ನ್ಯಾಯ ದೊರೆಯದೇ ಹೋದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಹುಡುಗಿ ಮೇಲೆ ಅನ್ಯಾಯ ನಡೆಯುತ್ತಿದ್ದಾಗ ಭಗವಾನ್ ರಾಮ, ಮಾತೆ ಸೀತೆ ಎಲ್ಲಿ ಹೋಗಿದ್ದರು? ಇದು ನಮ್ಮ ಸಾಮೂಹಿಕ ವೈಫಲ್ಯ. ಇತಿಹಾಸ ಏನು ಹೇಳಲಿದೆ?’ ಎಂದು ಪ್ರಶ್ನಿಸಿದ್ದಾರೆ.
ಅಯೋಧ್ಯೆ ಸಮೀಪದ ಹಳ್ಳಿಯ ಸಂತ್ರಸ್ತೆ ಜ. 30ರ ರಾತ್ರಿ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಗಾಗಿ ಎಲ್ಲ ಕಡೆ ಹುಡುಕಾಟ ನಡೆಸಲಾಯಿತು. ಫೆ. 1ರ ಬೆಳಗ್ಗೆ ಅವರ ಮನೆಯ ಸಮೀಪದ ಕಾಲುವೆಯಲ್ಲಿ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆಕೆಯ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿತ್ತು. ದೇಹದಲ್ಲಿ ಅಲ್ಲಲ್ಲಿ ತೀವ್ರ ತರದ ಗಾಯಗಳಿದ್ದವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಜತೆಗೆ ಎರಡೂ ಕಣ್ಣುಗಳು ಇರಲಿಲ್ಲ ಎಂದೂ ಘಟನೆಯ ಭೀಕರತೆಯನ್ನು ತೆರೆದಿಟ್ಟಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ಆಶುತೋಷ್ ತಿವಾರಿ ಮಾತನಾಡಿ, ಶುಕ್ರವಾರ ನಾಪತ್ತೆ ದೂರು ದಾಖಲಿಸಲಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ವಿವರ ತಿಳಿಯಲಿದೆ. ತನಿಖೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ನಾಪತ್ತೆ ದೂರು ದಾಖಲಿಸಿದ್ದರೂ ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.