Friday, January 9, 2026

ಕ್ಷುಲ್ಲಕ ಕಾರಣಕ್ಕೆ 6 ವರುಷದ ಬಾಲಕಿಯ ಭೀಕರ ಕೊಲೆ: ಚರಂಡಿಯಲ್ಲಿ ಪತ್ತೆಯಾಯ್ತು ಶವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಪತ್ನಿಯೊಂದಿಗೆ ನಡೆದ ಜಗಳ, ಕೊನೆಯಲ್ಲಿ ಆರು ವರ್ಷದ ಮಗುವಿನ ಪ್ರಾಣಪಕ್ಷಿ ಹಾರಿಹೋಗುವಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರುಹಳ್ಳಿಯಲ್ಲಿ ಈ ಘನಘೋರ ಕೃತ್ಯ ನಡೆದಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.

ಪಶ್ಚಿಮ ಬಂಗಾಳ ಮೂಲದ ಇಜಾಮುಲ್ ಶೇಖ್ ಮತ್ತು ಆರೋಪಿ ಯೂಸಫ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಇಬ್ಬರೂ ನಲ್ಲೂರುಹಳ್ಳಿಯಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದು, ಆತ್ಮೀಯ ಗೆಳೆಯರಾಗಿದ್ದರು. ಆಗಾಗ ಇಜಾಮುಲ್ ಮನೆಗೆ ಹೋಗುತ್ತಿದ್ದ ಯೂಸಫ್‌ಗೆ, ಇಜಾಮುಲ್ ಪತ್ನಿಯೊಂದಿಗೆ ಸಣ್ಣ ವಿಷಯಕ್ಕೆ ಗಲಾಟೆಯಾಗಿತ್ತು. ಈ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಯೂಸಫ್, ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದ್ದ.

ಪರಿಚಯಸ್ಥನೇ ಆಗಿದ್ದರಿಂದ, ಯೂಸಫ್ ಕರೆದಾಗ 6 ವರ್ಷದ ಬಾಲಕಿ ಶನಾದ್ ಯಾವುದೇ ಅನುಮಾನವಿಲ್ಲದೆ ಆತನ ಹಿಂದೆ ಹೋಗಿದ್ದಾಳೆ. ಈ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ, ಅಲ್ಲಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಚರಂಡಿಗೆ ಎಸೆದು ಏನೂ ಅರಿಯದವನಂತೆ ಪರಾರಿಯಾಗಿದ್ದ.

ಮಗು ಕಾಣೆಯಾದ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಯೂಸಫ್‌ನನ್ನು ಬಂಧಿಸಿದ್ದಾರೆ. ತೀವ್ರ ವಿಚಾರಣೆಯ ನಂತರ ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಬಗ್ಗೆಯೂ ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.

error: Content is protected !!