ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಶಿಕಾರಪುರ ವಿಧಾನಸಭಾ ಕ್ಷೇತ್ರ (Shikaripur Assembly Constituency) ಅಭ್ಯರ್ಥಿಯಾಗಿ ಇಂದು ಬಿವೈ ವಿಜಯೇಂದ್ರ (BY Vijayendra) ಅವರು (ಏ.19) ರಂದು ನಾಮಪತ್ರ ಸಲ್ಲಿಸಿದ್ದಾರೆ .
ಈ ದಿನ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗೆ ಮಗನ ಚುನಾವಣಾ ಜೀವನದ ಆರಂಭದ ಖುಷಿ ಜೊತೆಗೆ ಅವರ ಮೆಚ್ಚಿನ ಲಕ್ಕಿ ಅಂಬಾಸಿಡರ್ ಕಾರಿನಲ್ಲಿ ಹೋಗಿದ್ದು ಮತ್ತಷ್ಟು ಖುಷಿ ನೀಡಿದೆ.
ಈ ಅಂಬಾಸಿಡರ್ (Ambassador) ಕಾರು ಬಿಎಸ್ ಯಡಿಯೂರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾಗ ಬಳಸಿದ್ದರು. ಈ ಕಾರಿನಲ್ಲಿಯೇ ರಾಜ್ಯವನ್ನು ಸುತ್ತುತ್ತಿದ್ದರು. ಅಲ್ಲದೇ ಬಿಎಸ್ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಕೂಡ ಇದೇ ಕಾರನ್ನು ಬಳಸುತ್ತಿದ್ದರು. ಈ ಮೂಲಕ ಕಾರು ಬಿಎಸ್ ಯಡಿಯೂರಪ್ಪ ಅವರಗೆ ಲಕ್ಕಿ ಕಾರ್ ಆಗಿದೆ. ಈ ಹಿನ್ನೆಲೆ ಪುತ್ರ ಬಿವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಹೋಗುವಾಗಲೂ ಲಕ್ಕಿ ಕಾರನ್ನೇ ಬಳಸಿದ್ದಾರೆ.
ಬಿವೈ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಕೆಗೆ ಹೋಗುವ ಮುಂಚೆ ತಂದೆ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಲಕ್ಕಿ ಕಾರಿನಲ್ಲಿ ತಂದೆ ಮತ್ತು ಸಹೋದರನೊಂದಿಗೆ ಒಟ್ಟಿಗೆ ಹೋಗಿ ಬಿವೈ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಪುತ್ರ ಬಿವೈ ವಿಜಯೇಂದ್ರ ಮಾತನಾಡಿ, ಬಿಎಸ್ ಯಡಿಯೂರಪ್ಪ ಅವರ ರಾಜಕಾರಣ ಪ್ರಾರಂಭವಾಗಿದ್ದು ಅಂಬಾಸಿಡರ್ (CKR 45) ಕಾರಿನಲ್ಲಿ. ಈ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಈ ಕಾರನ್ನು ನೋಡಿದರೇ ರಾಜ್ಯದ ಕಾರ್ಯಕರ್ತರಿಗೆ ರೋಮಾಂಚನವಾಗುತ್ತದೆ. ಬಿಜೆಪಿಯ ಗುರುತು ಕಮಲವಾಗಿದ್ದರೇ, ಬಿಎಸ್ ಯಡಿಯೂರಪ್ಪ ಅವರ ಗುರುತು CKR45 ಕಾರು ಎಂದು ಹೇಳಿದರು.