ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್ಎಫ್ ಮಹಿಳಾ ಸಿಬ್ಬಂದಿ ಗೋವುಗಳ ಅಕ್ರಮ ಸಾಗಣೆಯನ್ನು ತಡೆಯುವ ಮೂಲಕ ಶೌರ್ಯ ಮೆರೆದಿದ್ದಾರೆ.
ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಅಕ್ರಮ ಸಾಗಣೆಯನ್ನು ಮಹಿಳಾ ಸಿಬ್ಬಂದಿಯು ತಡೆದಿದ್ದಾರೆ. ಮಾಲ್ಡಾ ಜಿಲ್ಲೆಯ ಕೇದಾರಿಪರ ಬಳಿಯ ಗಡಿಯಲ್ಲಿ ಸುಮಾರು ಆರೇಳು ಅಕ್ರಮ ಸಾಗಣೆದಾರರನ್ನು ತಡೆದಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳುವ ಜತೆಗೆ ಅಪಾಯದ ಮುನ್ನೆಚ್ಚರಿಕೆ ಅರಿತು ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ.
ಬಿಎಸ್ಎಫ್ ಮಹಿಳಾ ಸಿಬ್ಬಂದಿಯು ಗೋವುಗಳ ಸಾಗಣೆದಾರರನ್ನು ತಡೆದ ಬಳಿಕ ದುಷ್ಕರ್ಮಿಗಳು ಸಿಬ್ಬಂದಿಯ ಮೇಲೆ ದಾಳಿ ಆರಂಭಿಸಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆಗಲೂ ಜಗ್ಗದ ಸಿಬ್ಬಂದಿಯು ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಬೆಚ್ಚಿದ ದುಷ್ಕರ್ಮಿಗಲೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗೋವುಗಳನ್ನು ಅಲ್ಲಿಯೇ ಬಿಟ್ಟು ಅವರು ಪರಾರಿಯಾಗಿದ್ದಾರೆ .
ಇದಾದ ಬಳಿಕ ಬಿಎಸ್ಎಫ್ ಯೋಧರ ತಂಡವು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದೆ. ಬಿಎಸ್ಎಫ್ ಯೋಧರು ಆರು ಎಮ್ಮೆಗಳು ಹಾಗೂ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.