ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಬಸವರಾಜ ಬೊಮ್ಮಾಯಿ ನನ್ನ ಒಳ್ಳೆಯ ಸ್ನೇಹಿತ ಎಂದು ಮಾತು ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅವರ ಚೊಚ್ಚಲ ಬಜೆಟ್ ಮೇಲಿಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ ಎಂದಿದ್ದೇ ಬಜೆಟ್ ಮೇಲಿನ ಚರ್ಚೆಯ ವೇಳೆ ಸ್ನೇಹ-ರಾಜಕೀಯ ಮತ್ತು ವೈಚಾರಿಕತೆಯ ವಿಶ್ಲೇಷಣೆಗೆ ಕಾರಣವಾಯಿತು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದರಾಮಯ್ಯ ಅವರಿಗೆ 2022-23ನೇ ಸಾಲಿನ ಆಯವ್ಯಯದ ಮೇಲೆ ಚರ್ಚೆ ನಡೆಸಲು ಅನುಮತಿ ನೀಡಿದರು. ಈ ವೇಳೆ ಆಗಷ್ಟೇ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಆರ್. ಅಶೋಕ್ ಸಭಾಂಗಣದಿಂದ ಹೊರ ಹೋಗುತ್ತಿದ್ದರು. ಅವರನ್ನು ಕುಳಿತುಕೊಳ್ಳುವಂತೆ ತಿಳಿಸಿದರು. ನಾವು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಕೊನೆಯವರೆಗೂ ಕೂತು ಕೇಳಿದ್ದೇವೆ, ಆದರೆ ನಾವು ಮಾತಾಡುವಾಗ ನೀವು ಓಡಾಡುತ್ತಿದ್ದರೆ ಹೇಗೆ ಎಂದು ಸಿದ್ದ ರಾಮಯ್ಯ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನೂ ಕಾಳೆದರು. ಹಿಂದೆ ಕೂತು ನೀವೆಲ್ಲ ಇವರನ್ನೆಲ್ಲ ಗಮನಿಸುತ್ತೀರಿ ಅಂತ ನಮ್ಮ ಭಾವನೆ, ನೀವು ತಡೆಯಲಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಶೋಕ ಹೊರಟಿದ್ದರು. ನೀವು ಹೇಳಿದ್ದಕ್ಕೆ ಈಗ ಕೂತಿದ್ದಾರೆ. ನೀರು ಬೇಕಿದ್ದರೆ, ಇಲ್ಲೇ ತರಿಸುವುದಕ್ಕೆ ಆಗಲ್ವೇ ಎಂದು ಕಿಚಾಯಿಸಿದರು.
ಸ್ನೇಹದ ಬಗ್ಗೆ ವ್ಯಕ್ತವಾಯಿತು ಅನುಮಾನ!
ನನಗೆ ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಸ್ನೇಹಿತರು. ಅವರ ತಂದೆ ರಾಯಿಸ್ಟ್. ಇವರಿಗೂ ಅವರ ತಂದೆಯವರ ಪ್ರಭಾವ ಇದೆ ಎಂಬ ಭಾವನೆ. ಹಾಗಾಗಿ ನಿರೀಕ್ಷೆಯನ್ನು ಅವರ ಬಜೆಟ್‌ನಲ್ಲಿ ಇಟ್ಟಿದ್ದೆ. ಆ ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರದಿಂದ ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಆಗ ವಿಧಾನಸಭಾಧ್ಯಕ್ಷರು ನೀವು ಸ್ನೇಹಿತರು ಅಂತ ಶುರು ಮಾಡಿ, ಅವರನ್ನು ಈ ರೀತಿ ಹೇಳಿದರೆ ನಿಮ್ಮ ಸ್ನೇಹ ಯಾವ ರೀತಿಯದ್ದು ಎಂದು ನನಗೆ ಅನುಮಾನ ಎಂದು ಹಾಸ್ಯ ಮಾಡಿದರು.
ಸ್ನೇಹ ಮತ್ತು ರಾಜಕಾರಣ ಬೇರೆ ಬೇರೆ
ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸ್ನೇಹ ಬೇರೆ, ರಾಜಕಾರಣ ಬೇರೆ. ನಿಮಗೂ ನನಗೂ ಒಳ್ಳೆಯ ಸ್ನೇಹ. ಆದರೆ ನೀವು ಆರ್‌ಎಸ್‌ಎಸ್‌ನವರು, ನಾನು ಬೇರೆ ಹಿನ್ನೆಲೆಯಿಂದ ಬಂದಿದ್ದೇನೆ. ನಮಗೂ ನಿಮಗೂ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯಗಳಿವೆ. ಆದರೆ ಮನುಷ್ಯತ್ವ, ಸ್ನೇಹ ಬಹಳ ಮುಖ್ಯ. ನಾನು ನಿಮ್ಮನ್ನು ಪ್ರೀತಿಸ್ತೇನೆ, ನೀವು ನನ್ನನ್ನು ಪ್ರೀತಿಸುತ್ತೀರಿ. ಅದು ಮುಂದುವರಿಯುತ್ತದೆ. ಸ್ನೇಹ ಇದ್ದೇ ಇರುತ್ತದೆ. ಬಸವರಾಜ ಬೊಮ್ಮಾಯಿ ಹೊರಗಡೆ ಸಿಕ್ಕಿದಾಗ ಬೇರೆಯಾಗಿ ಮಾತಾಡುತ್ತೇನೆ. ಇಲ್ಲಿ ಮಾತ್ರ ನಾನು ರಾಜಕೀಯವಾಗಿ ಮಾತಾಡಲೇ ಬೇಕಲ್ಲ. ಅವರ ಬಜೆಟ್‌ನಿಂದ ಬೇಸರ ಆಗಿದೆ ಎಂದು ಹೇಳಿದ್ದೇನೆ, ನೋವು ಅಂದಿಲ್ಲ ಎಂದರು.