ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸುಂಕಗಳನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರನ್ನು ಶೋಷಿಸುವ ಬಜೆಟ್ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದರು.
ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ, ನಾಳೆ ಬಗ್ಗೆ, ಕರ್ನಾಟಕದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿಯ ಚಿಂತನೆ ಇಲ್ಲದ, ಸಂಸತ್ ಚುನಾವಣೆಯನ್ನು ಏನಾದರೂ ಮಾಡಿ ಗೆಲ್ಲಬೇಕೆಂಬ ಯೋಚನೆಯ ಬಜೆಟ್ ಮಂಡಿಸಿದ್ದಾರೆ. ಸುಮಾರು 85 ಸಾವಿರ ಕೋಟಿಯಷ್ಟು ಹೊಸ ಸಾಲ ಮಾಡಿ ಹಂಚಿಕೆ ಮಾಡುವ ನೀತಿ ಇವರದು. ಕರ್ನಾಟಕವನ್ನು ಭವಿಷ್ಯದಲ್ಲಿ ಮುಳುಗಿಸುವ ಭೀತಿ ಕಾಡುತ್ತಿದೆ ಎಂದು ವಿಶ್ಲೇಷಿಸಿದರು.
ಮೂಲ ಸೌಕರ್ಯಕ್ಕೆ ಬಂಡವಾಳ ಹೂಡಿದಾಗ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ಈ ಸರಕಾರ ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟಿಲ್ಲ. ಮೂಲಸೌಕರ್ಯದಲ್ಲಿ ಹೂಡಿಕೆಗೆ ಕ್ರಮ ತೆಗೆದುಕೊಂಡಿಲ್ಲ. ಮಾವನ ಜೋಬಿನಿಂದ ಕತ್ತರಿಸಿ ಅತ್ತೆ ಕೈಗೆ ಕೊಟ್ಟು ಹಮ್ಮೀರ ಎನಿಸಿಕೊಳ್ಳುವ ಚಿಂತನೆ ಇವರದು ಎಂದು ಆಕ್ಷೇಪಿಸಿದರು.
ರೈತರು ಉದ್ಯಮಿಗಳಾಗಬಾರದು ಎಂಬ ಚಿಂತನೆ ನಿಮ್ಮದೇ? ರೈತರು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಬಾರದೇ? ಅವರನ್ನು ಜಾಗತಿಕ ಮಾರುಕಟ್ಟೆ ಪ್ರವೇಶಿಸದಂತೆ ತಡೆಯುವ ಹುನ್ನಾರ ನಿಮ್ಮದೇ? ನಾವು ರೈತರ ಆದಾಯವನ್ನು ಯೋಚಿಸಿದರೆ ನೀವು ಎಪಿಎಂಸಿ ಆದಾಯವನ್ನು ಚಿಂತಿಸುತ್ತಿದ್ದೀರಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಅಮೃತದಂಥ ಮಾತು, ವಿಷ ಹಾಕುವಂಥ ಚಿಂತನೆ ನಿಮ್ಮ ಬಜೆಟ್ನಲ್ಲಿ ಇದ್ದಂತಿದೆ ಎಂದು ಟೀಕಿಸಿದರು.
ಮೇಲುನೋಟಕ್ಕೆ ಸಕ್ಕರೆ ಕೊಟ್ಟು ಒಳಗಡೆ ಕಹಿ ಉಣಿಸುವ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.