ಜನರ ಕಿವಿಗೆ ಹೂವು ಇಡುವ ಬಜೆಟ್: ಶಿವಕುಮಾರ್ ನಾಣಯ್ಯ

ಹೊಸದಿಗಂತ ವರದಿ  ಮಡಿಕೇರಿ:

ಕರ್ನಾಟಕದ ಇತಿಹಾಸದಲ್ಲಿ ಇದೊಂದು ನಿರಾಶದಾಯಕ ಬಜೆಟ್. ಕೊಡಗಿನಲ್ಲಿ ಎರಡು ಕಾಂಗ್ರೆಸ್ ಶಾಸಕರಿದ್ದರೂ, ಈ ಬಾರಿ ಕೊಡಗಿಗೆ ವಿಶೇಷ ಅನುದಾನ ಹಾಗೂ ಯೋಜನೆಗಳು ಘೋಷಣೆಯಾಗದಿರುವುದು ಬಹಳ ನಿರಾಸೆ ತಂದಿದೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮುಂಬರುವ ಚುನಾವಣೆ ದೃಷ್ಟಿಯಿಂದ ಜನರ ಕಿವಿಗೆ ಹೂವು ಇಡುವ ಬಜೆಟ್ ಇದಾಗಿದೆ. ಇದರಿಂದ ಕೊಡಗಿನ ಹಾಗೂ ರಾಜ್ಯದ ಅಭಿವೃದ್ಧಿಗೆ ಯಾವುದೇ ಪ್ರಯೋಜನವಿಲ್ಲ. ಭರವಸೆ ಈಡೇರಿಸಲು ಸಾಧ್ಯವಾಗದ ಉಚಿತ ಗ್ಯಾರಂಟಿ ಯೋಜನೆಗಳಿಗೆ ಸುಮಾರು 60 ಸಾವಿರ ಕೋಟಿಗಿಂತ ಜಾಸ್ತಿ ಹಣ ಬೇಕಾಗಿರುವುದರಿಂದ ಅಭಿವೃದ್ಧಿಗೆ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದ್ದಾರೆ.

ಕೊಡಗಿಗೆ ಕ್ರೀಡಾಕ್ಷೇತ್ರಕ್ಕೆ ಅನುದಾನ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಹುಸಿಯಾಗಿದೆ. ವಾಹನ ತೆರಿಗೆ ಶೇ.7, ನೋಂದಣಿ ಮುದ್ರಾಂಕ ಶುಲ್ಕ ಶೇ. 14, ಅಬಕಾರಿ ಸುಂಕ ,ಶೇ.‌20, ಇತರ ವಾಣಿಜ್ಯ ತೆರಿಗೆ ಸುಮಾರು ಶೇ 58, ಇತರ ತೆರಿಗೆ ಸುಮಾರು ಶೇ.2ರಷ್ಟು ಸೇರಿದಂತೆ ಎಲ್ಲಾ ತೆರಿಗೆಗಳು ಹೆಚ್ಚಾಗಿವೆ. ಈ ಹೆಚ್ಚಳದಿಂದ ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ, ಬಡವರಿಗೆ ನಿತ್ಯದ ಜೀವನಕ್ಕೆ ಈ ಬಜೆಟ್ ಹೊರೆಯಾಗುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೆ ಯಾವುದೇ ಪರಿಹಾರ ಯೋಜನೆಯೂ ಇಲ್ಲದ ಈ ಬಜೆಟ್ ಜನರಿಗೆ ಆರ್ಥಿಕವಾಗಿ ಹೊರೆಯಾಗಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here