ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದೆ. ಡಿಜಿಟಲ್ ಕಲಿಕೆ, ಕೌಶಲಗಳ ಪೂರೈಕೆ ಮತ್ತು ನವೋದ್ಯಮಗಳ ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ. ಈ ಉಪಕ್ರಮಗಳು ಅತ್ಯಂತ ಸಮಯೋಚಿತ ಮತ್ತು ಅರ್ಥಪೂರ್ಣವಾಗಿವೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ‘ಒಂದು ತರಗತಿ, ಒಂದು ಟಿವಿ ಚಾನೆಲ್’ ಘೋಷಣೆಯಡಿ 200 ಟಿವಿ ವಾಹಿನಿಗಳಿಗೆ ಅವಕಾಶ ನೀಡಿರುವುದು ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ಕ್ರಮವಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ವಿಶ್ವ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಹುದು. ಇದು ಎನ್ಇಪಿ ಆಶಯಗಳಿಗೆ ತಕ್ಕಂತಿದೆ ಎಂದಿದ್ದಾರೆ.
ಜೊತೆಗೆ, ಕೌಶಲಗಳ ಪೂರೈಕೆ ಮತ್ತು ಅವುಗಳ ಸಮರ್ಪಕ ಜಾರಿಗೆ ದೇಶ್ ಇ-ಪೋರ್ಟಲ್ ಸ್ಥಾಪನೆ, ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ, ಎವಿಜಿಸಿ ಕಾರ್ಯಪಡೆ ಸ್ಥಾಪನೆ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗೆ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಕ್ರಿಪ್ಟೋಕರೆನ್ಸಿ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿರುವುದಲ್ಲದೆ, ಡೀಪ್ ಟೆಕ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆಗಳನ್ನು ಘೋಷಿಸಿರುವುದರಿಂದ ಜನರ ಜೀವನ ಗುಣಮಟ್ಟ ಸುಧಾರಿಸುತ್ತದೆ. ಇದಕ್ಕೆ ಪೂರಕವಾಗಿ ‘ಸುಗಮ ಜೀವನ’ (ಈಸ್ ಆಫ್ ಲಿವಿಂಗ್) ಸಂಸ್ಕೃತಿಯನ್ನು ರೂಪಿಸಲು ಹೆಜ್ಜೆ ಇಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ರಾಜ್ಯಗಳನ್ನು ಅಭಿವೃದ್ಧಿಯ ಪಾಲುದಾರರನ್ನಾಗಿ ಮಾಡಿಕೊಳ್ಳುವ ಮೂಲಕ ನೂತನ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿರುವುದರಿಂದ ಬಂಡವಾಳದ ಹರಿವು ನಿರಂತರವಾಗಿ ಇರಲಿದೆ. ಇದರಿಂದ 5 ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗ ಸೃಷ್ಟಿ ಕೂಡ ನನಸಾಗಲಿದೆ. ಹಾಗೆಯೇ ಸ್ಟಾರ್ಟಪ್ ಗಳಿಗೆ ಸಾಲ ಸೌಲಭ್ಯವನ್ನು ಇನ್ನೂ ಒಂದು ವರ್ಷ ಕಾಲ ವಿಸ್ತರಿಸಿರುವುದರಿಂದ ರಾಜ್ಯದಲ್ಲಿ ಇನ್ನೂ ಸಾವಿರಾರು ನವೋದ್ಯಮಗಳು ರಾಜ್ಯದಲ್ಲಿ ನೆಲೆಯೂರಲು ಸಹಾಯವಾಗಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.