ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಊರಿನ ರಸ್ತೆ ಮಳೆಯಿಂದಾಗಿ ತುಂಬಾ ಹಾಳಾಗಿದೆ. ಓಡಾಡಲು ಆಗುತ್ತಿಲ್ಲ. ಶಾಲೆಗೆ ಹೋಗೋಕೆ ಇಷ್ಟ. ಆದರೆ ರಸ್ತೆ ಹೀಗಿರೋದ್ರಿಂದ ತುಂಬಾ ಕಷ್ಟವಾಗಿದೆ. ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದು ಎಂದು 8ನೇ ತರಗತಿ ವಿದ್ಯಾರ್ಥಿನಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಲಗಾರು ಶಾಲೆಯಲ್ಲಿ ಓದುತ್ತಿರುವ ಲೋಕನಾಥಪುರ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ.
ಪತ್ರದಲ್ಲಿ, ನಮ್ಮ ಊರಿನಿಂದ ಶಾಲೆಗೆ 3-4 ಕಿ.ಮೀ ಇದೆ. ಆದರೆ, ರಸ್ತೆಯಲ್ಲಿನ ಗುಂಡಿ ಹಾಗೂ ಕೆಸರಿನಿಂದ ಶಾಲೆಗೆ ಹೋಗೋದಕ್ಕೆ ಆಗುತ್ತಿಲ್ಲ. ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಯಾಗುತ್ತದೆ. ವಾರದಲ್ಲಿ 2-3 ದಿನ ಶಾಲೆಗೆ ಹೋಗೋದಕ್ಕೂ ಆಗುವುದಿಲ್ಲ. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇರಿದಂತೆ ಯಾವುದೇ ವಾಹನಗಳು ನಮ್ಮ ಹಳ್ಳಿಗೆ ಬರಲು ಆಗುವುದಿಲ್ಲ.
ಈ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಸ್ಥಳೀಯ ಆಡಳಿತ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ. ಅತಿ ಹೆಚ್ಚು ಮಳೆ ಬೀಳುವ ನಮ್ಮ ಭಾಗದಲ್ಲಿ ಮಳೆಗಾಲದ ಮೂರ್ನಾಲ್ಕು ತಿಂಗಳು ಭಾರೀ ಕಷ್ಟವಾಗುತ್ತಿದೆ. ಮಕ್ಕಳು-ಮಹಿಳೆಯರು ಓಡಾಡಲು ಹರಸಾಹಸಪಡಬೇಕಾಗಿದೆ. ಹಾಗಾಗಿ, ನಮ್ಮ ಊರಿನ ರಸ್ತೆ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿಗೆ ಸಹಕರಿಸಬೇಕಾಗಿ ಪತ್ರ ಬರೆದು ಮೋದಿ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾಳೆ.