ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಯ ಮಧ್ಯೆಯೇ ರಾಜ್ಯ ಸರ್ಕಾರವು ಅರ್ಹರಿಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಅರ್ಹತೆ ಇದ್ದರೂ ತಾಂತ್ರಿಕ ಕಾರಣಗಳಿಂದ ಅಥವಾ ಇನ್ಯಾವುದೋ ಕಾರಣಕ್ಕೆ ಎಪಿಎಲ್ ಕಾರ್ಡ್‌ಗೆ ಬದಲಾಗಿ ವಂಚಿತರಾದವರಿಗೆ ಸರ್ಕಾರವು ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ನೀಡಿದೆ. ಇದು ಲಕ್ಷಾಂತರ ಅರ್ಹ ಕುಟುಂಬಗಳಿಗೆ ದೊರೆತ ‘ಗುಡ್ ನ್ಯೂಸ್’.
ಸರ್ಕಾರವು ಆಹಾರ ಇಲಾಖೆಗೆ ಸ್ಪಷ್ಟ ಗಡುವು ನೀಡಿದ್ದು, 45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಬೇಕು ಎಂದು ಸೂಚಿಸಿದೆ. ಎಪಿಎಲ್‌ಗೆ ಬದಲಾಗಿರುವವರು ಅಗತ್ಯವಿರುವ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ, ಅವರಿಗೆ ಬಿಪಿಎಲ್ ಕಾರ್ಡ್ ದೊರೆಯಲಿದೆ.
ಒಂದು ಕಡೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಎಪಿಎಲ್‌ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅರ್ಹರಾಗಿದ್ದರೂ ಎಪಿಎಲ್‌ಗೆ ಬದಲಾಗಿರುವವರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿದೆ.
ಮರುಪರಿಶೀಲನೆ ಮತ್ತು ವಿತರಣೆಯ ಪ್ರಕ್ರಿಯೆ:
ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ (ಕೇಂದ್ರದ ಲೆಕ್ಕದ ಪ್ರಕಾರ 7,76,206). ಇವುಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಮಧ್ಯೆ, ಅರ್ಹರ ಕಾರ್ಡ್ ಒಂದು ವೇಳೆ ಎಪಿಎಲ್‌ಗೆ ಬದಲಾಗಿದ್ದರೆ, ಅಂತಹವರು 45 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅರ್ಹರಿದ್ದಲ್ಲಿ ಅವರಿಗೆ ಬಿಪಿಎಲ್ ಕಾರ್ಡ್ ನೀಡಲು ಸರ್ಕಾರ ನಿರ್ದೇಶನ ನೀಡಿದೆ.
ವರ್ಷಗಳಿಂದ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೂ ಈ ಸುದ್ದಿ ಸಂತೋಷ ತಂದಿದೆ. ಈಗಾಗಲೇ ಹೊಸದಾಗಿ ಪಡಿತರ ಚೀಟಿಗಾಗಿ 2.96 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವವರೆಗೆ ಹೊಸದಾಗಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಆಹ್ವಾನಿಸಬಾರದು ಎಂದು ಸರ್ಕಾರ ಆಹಾರ ಇಲಾಖೆಗೆ ನಿರ್ದೇಶನ ಕೊಟ್ಟಿದೆ. ಸದ್ಯದಲ್ಲೇ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆಗೂ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ.