ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಡರ್ಸನ್–ತೆಂಡೂಲ್ಕರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಭಾರತ ಸೋತ ಬಳಿಕ, ಈಗ ಎಲ್ಲರ ಕಣ್ಣು ಜುಲೈ 23ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಮೇಲೆ ನೆಟ್ಟಿವೆ. ಮೂರು ಪಂದ್ಯಗಳ ಬಳಿಕ ಟೀಂ ಇಂಡಿಯಾ 1-2 ಹಿನ್ನಡೆ ಅನುಭವಿಸುತ್ತಿದ್ದು, ನಾಲ್ಕನೇ ಪಂದ್ಯ ಗೆದ್ದರೆ ಸರಣಿಯಲ್ಲಿ ಸಮಬಲ ಸಾಧಿಸುವ ಅವಕಾಶ ಭಾರತಕ್ಕೆ ಸಿಗಲಿದೆ. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಆಡ್ತಾರಾ ಇಲ್ಲವಾ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಬುಮ್ರಾ ಅವರು ಸರಣಿಗೆ ಮೊದಲು ನೀಡಿದ್ದ ಹೇಳಿಕೆಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲು ಸಿದ್ಧ ಎಂದು ಹೇಳಿದ್ದಾರೆ. ಈಗಾಗಲೇ ಅವರು ಎರಡು ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಪಂದ್ಯದಲ್ಲಿ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಪಂತ್ ಲಾರ್ಡ್ಸ್ ಟೆಸ್ಟ್‌ನಲ್ಲಿ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದು, ಮುಂದಿನ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂಬ ಆತಂಕ ಉಂಟಾಗಿದೆ.
ಲಾರ್ಡ್ಸ್ ಪಂದ್ಯದಲ್ಲಿ ಪಂತ್ ಕೀಪಿಂಗ್ ತಪ್ಪಿದರೂ, ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಧ್ರುವ್ ಜುರೆಲ್ ಕೀಪಿಂಗ್ ನಿರ್ವಹಿಸಿದ್ದರು. ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಹಿಡಿದು ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಪಂತ್ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್, “ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಸ್ಕ್ಯಾನ್ ವರದಿ ಸಹ ಸಹಜವಾಗಿದೆ. ಅವರು ಮ್ಯಾಂಚೆಸ್ಟರ್‌ನಲ್ಲಿ ಆಡಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಬುಮ್ರಾ ಕುರಿತು ಗಿಲ್ ನಿಗೂಢವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನೀವು ಶೀಘ್ರದಲ್ಲೇ ಅದರ ಬಗ್ಗೆ ತಿಳಿದುಕೊಳ್ಳುತ್ತೀರಿ” ಎಂದು ಅವರು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ್ದಾರೆ. ಇನ್ನು ಸ್ಕೈ ಸ್ಪೋರ್ಟ್ಸ್ ನೀಡಿರುವ ವರದಿ ಪ್ರಕಾರ, ಬುಮ್ರಾ ಮತ್ತು ಪಂತ್ ಇಬ್ಬರೂ ಟೀಂ ಇಂಡಿಯಾ ಪ್ಲೇಯಿಂಗ್ XIರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ನಾಯಕನ ಲೆಕ್ಕಾಚಾರ ಪ್ರಕಾರ, ಈ ಇಬ್ಬರೂ ಸ್ಟಾರ್ ಆಟಗಾರರ ಹಾಜರಾತಿ ಭಾರತಕ್ಕೆ ಗೆಲುವಿನ ದಾರಿ ತೆರೆದು ಕೊಡಬಹುದಾಗಿದೆ.
ಸರಣಿಯಲ್ಲಿ ಸಮಬಲ ಸಾಧಿಸುವ ಉದ್ದೇಶದಿಂದ ಟೀಂ ಇಂಡಿಯಾ ತನ್ನ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದೀಗ ಪಂತ್–ಬುಮ್ರಾ ಆಟಗಾರರನ್ನು ಕಣಕ್ಕಿಳಿಸುವ ನಿರ್ಧಾರ ಟೀಂ ಇಂಡಿಯಾ ಪರ ಎಷ್ಟು ಫಲಕಾರಿಯಾಗುತ್ತದೊ ಎಂಬುದನ್ನು ಕಾಡು ನೋಡಬೇಕಿದೆ.