ಹೊಸದಿಗಂತ ವರದಿ,ಮಂಗಳೂರು:
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಘಟನೆಯಲ್ಲಿ ಸೋಮವಾರ ಮಹತ್ವದ ಬೆಳವಣಿಗೆಗಳು ನಡೆದಿದ್ದು , ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಲಿನ ಪ್ರದೇಶಗಳಲ್ಲಿ ಅನಾಮಿಕ ವ್ಯಕ್ತಿ ತಾನು ಮೃತದೇಹಗಳನ್ನ ಹೂತು ಹಾಕಿರುವ 15 ಸ್ಥಳಗಳನ್ನು ಗುರುತಿಸಿದ್ದಾನೆ.
ಪೊಲೀಸರು ಈ 15 ಸ್ಥಳಗಳಲ್ಲಿಯೂ ಇದೀಗ ನಂಬರ್ ನೀಡಿ ಗುರುತಿಸಿದ್ದಾರೆ. ಇಲ್ಲಿ ಸುತ್ತ ಟೇಪ್ ಕಟ್ಟಲಾಗಿದ್ದು ಈ ಸ್ಥಳಗಳಲ್ಲಿ ರಾತ್ರಿ ಪೊಲೀಸ್ ಗಸ್ತನ್ನು ಏರ್ಪಡಿಸಲಾಗಿದೆ.
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿಯೇ ಈ 15 ಸ್ಥಳಗಳನ್ನು ಆತ ಗುರುತಿಸಿದ್ದಾನೆ. ಸ್ನಾನ ಘಟ್ಟದ ಒಳಗೆ ನದಿ ಬದಿಯಲ್ಲಿ ಮೊದಲ ಸ್ಥಳವನ್ನು ಆತ ಗುರುತಿಸಿದ್ದಾನೆ. ಅಲ್ಲಿಂದ ಮುಂದೆ ಅರಣ್ಯದೊಳಗೆ ಆತನೊಂದಿಗೆ ಎಸ್.ಐ.ಟಿ ತಂಡದವರು ತೆರಳಿದ್ದು ಅಲ್ಲಿ ಆತ ಎಂಟು ಸ್ಥಳಗಳನ್ನು ಗುರುತಿಸಿದ್ದಾನೆ. ಈ ಎಲ್ಲ ಸ್ಥಳಗಳ ಸುತ್ತ ಟೇಪ್ ಕಟ್ಟಲಾಗಿದೆ. ಇದಾದ ಬಳಿಕ ನೇತ್ರಾವತಿ ಸ್ನಾಘಟ್ಟದಿಂದ ನೂರು ಮೀಟರ್ ಮುಂದೆ ಧರ್ಮಸ್ಥಳ ಉಜಿರೆ ರಸ್ತೆಯ ಬದಿಯಲ್ಲಿ ಹೆದ್ದಾರಿಯಿಂದ ಎರಡು ಮೂರು ಮೀಟರ್ ದೂರದಲ್ಲಿ ಈತ ಮೂರು ಸ್ಥಳಗಳನ್ನು ಗುರುತಿಸಿದ್ದಾನೆ. ಮುಂದೆ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಿಂಡಿ ಅಣೆಕಟ್ಟಿಗೆ ತಾಗಿಕೊಂಡಿರುವ ಪ್ರದೇಶದಲ್ಲಿ ಈ ಮತ್ತೊಂದು ಸ್ಥಳವನ್ನು ಗುರುತಿಸಿದ್ದಾನೆ ಇಲ್ಲಿ ದೊಡ್ಡದಾದ ಸ್ಥಳದ ಸುತ್ತ ಮಾರ್ಕ್ ಮಾಡಲಾಗಿದೆ.
ಇದಾದ ಬಳಿಕ ಸಾಕ್ಷಿ ದೂರುದಾರ ಎಸ್.ಐ.ಟಿ ತಂಡವನ್ನು ಧರ್ಮಸ್ಥಳ ಕನ್ಯಾಡಿಯ ಒಳಪ್ರದೇಶದಲ್ಲಿ ಖಾಸಗಿ ಜಾಗವೊಂದಕ್ಕೆ ಕರೆದೊಯ್ದಿದ್ದು ಅಲ್ಲಿ ಸ್ಥಳವೊಂದನ್ನು ತೋರಿಸಿದ್ದಾನೆ ಈ ವೇಳೆಗೆ ಸಂಜೆಯಾಗಿದ್ದು ಮಳೆಯೂ ಬಂದ ಕಾರಣ ಇಲ್ಲಿ ಸ್ಥಳವನ್ನು ಗುರುತಿಸುವ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಲ್ಲಿಂದ ಎಸ್.ಐ.ಟಿ ತಂಡ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ಹಿಂತಿರುಗಿದ್ದಾರೆ.
ಎಸ್ಐಟಿ ತಂಡ ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದು 9 ಗಂಟೆಯ ಸುಮಾರಿಗೆ ಎಸ್.ಪಿ ಅನುಚೇತ್ ನೇತೃತ್ವ ತಂಡ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದಿದೆ.
ಅಲ್ಲಿ ಕಂದಾಯ ಇಲಾಖೆ,ಅರಣ್ಯ ಇಲಾಖೆ, ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದಾದ ಬಳಿಕ 11ಗಂಟೆಯ ಸುಮಾರಿಗೆ ಸಾಕ್ಷಿ ದೂರುದಾರ ಎಸ್.ಐ.ಟಿ ಕಚೇರಿಗೆ ವಕೀಲರುಗಳೊಂದಿಗೆ ಆಗಮಿಸಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಆತನಿಂದ ಮಾಹಿತಿ ಪಡೆಯುವ ಕಾರ್ಯ ಮಾಡಿದ್ದಾರೆ.
ಬಳಿಕ ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಎಸ್.ಐ.ಟಿ ತಂಡದವರು ನೇತ್ರಾವತಿ ಸ್ನಾನಘಟ್ಟದ ಬಳಿಗೆ ಬಂದಿದ್ದಾರೆ. ಅಲ್ಲಿಂದ ಮೂರುಗಂಟೆಯ ವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆದಿದೆ. ೩ ಗಂಟೆಗೆ ಧರ್ಮಸ್ಥಳ ಠಾಣೆಗೆ ಊಟಕ್ಕೆ ತೆರಳಿದ್ದು ಬಳಿಕ ೪ಗಂಟೆಯ ಸುಮಾರಿಗೆ ಕಾರ್ಯಾಚರಣೆ ಆರಂಭವಾಗಿ ಆರು ಗಂಟೆಯ ವರೆಗೂ ಮುಂದುವರಿದಿದೆ.
ನಾಳೆಯೂ ಸ್ಥಳ ಗುರುತಿಸುವಿಕೆ ಮುಂದುವರಿಯಲಿದೆ
ಇಂದು ಸುಮಾರು 15 ಸ್ಥಳಗಳನ್ನು ಸಾಕ್ಷಿ ದೂರುದಾರ ಗುರುತಿಸಿದ್ದಾನೆ ರಾತ್ರಿ ಕಾರ್ಯಾಚರಣೆ ಮಾಡುವಂತಿಲ್ಲ. ಭಾರೀ ಮಳೆಯೂ ಇರುವ ಕಾರಣ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಮಂಗಳವಾರ ಬೆಳಗ್ಹಿನಿಂದಲೇ ಸ್ಥಳಗಳನ್ನು ಗುರುತಿಸುವ ಕಾರ್ಯವನ್ನು ಪುನರಾರಂಭಿಸಲಾಗುವುದು. ಬಳಿಕ ಮುಂದಿನ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 
                                    